Latest

ಮಧ್ಯರಾತ್ರಿ ಪಾರ್ಟಿ ಮುಗಿಸಿ ಬರುತ್ತಿದ್ದ ದಂಪತಿಯನ್ನು ತಡೆದು ಹಣ ಸುಲಿಗೆ; ಇಬ್ಬರು ಹೊಯ್ಸಳ ಪೊಲೀಸರು ಅಮಾನತು!

ದಂಪತಿ ಪಕ್ಕದ ಮನೆಯ ಸ್ನೇಹಿತರ ಬರ್ತ್‌ಡೇ ಪಾರ್ಟಿಗೆ ಹೋಗಿದ್ದರು. ಪಾರ್ಟಿ ಮುಗಿಸಿ ಮನೆಗೆ ಹೋಗುವಾಗ ಮಧ್ಯರಾತ್ರಿ 12.30 ಆಗಿತ್ತು. ಜಿಟಿ ಜಿಟಿ ಮಳೆಯೊಂದಿಗೆ ವೇಗವಾಗಿ ಹೆಜ್ಜೆ ಹಾಕಿ ಮನೆಗೆ ಸೇರಲು ಮುಂದಾದವರನ್ನು ಅಡ್ಡಗಟ್ಟಿದ ಹೊಯ್ಸಳದ ಬೀಟ್‌ ಪೊಲೀಸರು ಹಣಕ್ಕಾಗಿ ಪೀಡಿಸಿದ ಘಟನೆ ಬೆಳಕಿಗೆ ಬಂದಿದೆ.
ಮಾನ್ಯತಾ ಟೆಕ್​ಪಾರ್ಕ್​ ಬಳಿ ಪಾರ್ಟಿ ಮುಗಿಸಿ ಬರುತ್ತಿದ್ದ ಕಾರ್ತಿಕ್ ಪೆತ್ರಿ ದಂಪತಿಯನ್ನು ಹೊಯ್ಸಳ ಪೊಲೀಸರು ತಡೆದಿದ್ದಾರೆ. ಮಧ್ಯರಾತ್ರಿ ಓಡಾಡುವುದು ಕಾನೂನು ಬಾಹಿರ, ಇದಕ್ಕಾಗಿ ದಂಡ ಕಟ್ಟಬೇಕೆಂದು ತಾಕೀತು ಮಾಡಿದ್ದಾರೆ. ಮಧ್ಯರಾತ್ರಿ ಓಡಾಟದ ನಿರ್ಬಂಧದ ಕುರಿತು ನಮಗೆ ಮಾಹಿತಿ ಇಲ್ಲ, ತಡರಾತ್ರಿ ಓಡಾಟಕ್ಕೆ ಕ್ಷಮೆಯಾಚಿಸುತ್ತೇವೆ ಎಂದು ದಂಪತಿ ಮನವಿ ಮಾಡಿದ್ದರಂತೆ. ಆದರೆ ವಸೂಲಿಗಾಗಿ ಕಾದುಕುಳಿತವರಂತೆ ಮೊದಲು ದಂಪತಿ ಬಳಿಯಿದ್ದ ಮೊಬೈಲ್‌ ಕಸಿದ ಪೊಲೀಸರು ₹3000ಕ್ಕೆ ಬೇಡಿಕೆ ಇಟ್ಟಿದ್ದರಂತೆ. ಈ ವೇಳೆ ದಂಪತಿ ಹಣ ಯಾಕಾಗಿ ಕೊಡಬೇಕೆಂದು ಪ್ರಶ್ನಿಸಿದಾಗ ಮಾತಿನ ಚಕಮಕಿಯಾಗಿದೆ. ದಂಪತಿ ಹಣ ಕೊಡುವುದಿಲ್ಲ ಎಂದಾಗ ಆ ಪೊಲೀಸರು ಬೆದರಿಕೆ ಹಾಕಿ ಬಂಧಿಸುವುದಾಗಿ ಹೇಳಿದ್ದರಂತೆ.
ಅಸಲಿ ಪೊಲೀಸರೋ ನಕಲಿ ಪೊಲೀಸರು ಎಂದು ತಿಳಿಯದ ದಂಪತಿ ಅಸಹಾಯಕತೆಯಿಂದ ಅವರ ಬೆದರಿಕೆಗೆ ಅಂಜಿ ಬಳಿಕ 3000 ರೂ. ಬದಲಾಗಿ 1000 ರೂ. ಡಿಜಿಟಲ್ ಪೇಮೆಂಟ್​ ಮಾಡಿದ್ದಾರೆ. ಹಣ ಕೊಟ್ಟ ಬಳಿಕ ದಂಪತಿಯನ್ನು ಪೊಲೀಸರು ಬಿಟ್ಟು ಕಳಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹೊಯ್ಸಳ ಪೊಲೀಸರು ಯಾಕಾಗಿ ನಮ್ಮಿಂದ ಹಣ ಪಡೆದಿದ್ದಾರೆ ಎಂಬುದೇ ಗೊತ್ತಿಲ್ಲ. 11 ಗಂಟೆ ನಂತರ ಹೊರಗೆ ಓಡಾಡಬಾರದು ಎಂದಿರುವ ಪೊಲೀಸರು, ಆಧಾರ್ ಕಾರ್ಡ್ ತೋರಿಸುವಂತೆ ಹೇಳಿದರು ಎಂದು ದಂಪತಿ ಹೇಳಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕಾರ್ತಿಕ್‌ ಬೆಂಗಳೂರು ನಗರ ಪೊಲೀಸರಿಗೆ ಟ್ವೀಟ್‌ ಮಾಡಿದ್ದಾರೆ. ಕಾನೂನು ರಕ್ಷಕರೇ ಕಾನೂನು ಮುರಿದರೆ ನಾಗಕರಿಕರನ್ನು ಕಾಪಾಡುವವರು ಯಾರು? ಇದೊಂದು ರೀತಿ ಭಯೋತ್ಪಾದಕತೆ ಅಲ್ಲವೇ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಕ್ರಮ ಕೈಗೊಳ್ಳುವುದಾಗಿ ರೀಟ್ವೀಟ್‌ ಮಾಡಿದ ಡಿಸಿಪಿ ಅಸೂಪ್‌ ಶೆಟ್ಟಿ
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ತೀವ್ರ ಆಕ್ರೋಶ ಕೇಳಿ ಬರುತ್ತಿದ್ದಂತೆ ಕಾರ್ತಿಕ್‌ ಟ್ವೀಟ್‌ಗೆ ರೀಟ್ವೀಟ್‌ ಮಾಡಿರುವ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ, ಹೊಯ್ಸಳ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿದ್ದರು.
ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅನೂಪ್‌ ಶೆಟ್ಟಿ, ಟ್ವಿಟರ್ ಮೂಲಕ ನಮಗೆ ಹೊಯ್ಸಳ ಪೊಲೀಸರು ಬೀಟ್‌ನಲ್ಲಿದ್ದಾಗ ದಂಪತಿ ಬಳಿ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಂತ್ರಸ್ತರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಹೊಯ್ಸಳದಲ್ಲಿದ್ದ ಸಿಬ್ಬಂದಿ ಕ್ಯೂಆರ್ ಕೋಡ್ ಮೂಲಕ 1,000 ರೂಪಾಯಿ ಪಡೆದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ತಿಳಿಸಿದ್ದರು.
ಹೊಯ್ಸಳ ಸಿಬ್ಬಂದಿ ಹೆಡ್‌ ಕಾನ್‌ಸ್ಟೇಬಲ್‌ ರಾಜೇಶ್, ಪೊಲೀಸ್‌ ಕಾನ್‌ಸ್ಟೇಬಲ್‌ ನಾಗೇಶ್ ಎಂಬುವರನ್ನು ಅಮಾನತು ಮಾಡಿರುವುದಾಗಿ ಡಿಸಿಪಿ ಅನೂಪ್‌ ಆ ಬಳಿಕ ಮಾಹಿತಿ ನೀಡಿದ್ದಾರೆ. ದಂಪತಿ ಮನೆ ಪಕ್ಕ ಸ್ನೇಹಿತರೊಬ್ಬರ ಬರ್ತ್‌ಡೇ ಇರುವುದರಿಂದ ಅಲ್ಲಿಗೆ ಹೋಗಿದ್ದರು. ಪಾರ್ಟಿ ಮುಗಿಸಿ ಬರುವಾಗ ಪೊಲೀಸರು ಮಾಹಿತಿ ಕೇಳಿದ್ದು, ಈ ವೇಳೆ ಅವರ ಬಳಿ ಒಂದು ಸಾವಿರ ಹಣ ಪಡೆದಿರುವುದು ಗೊತ್ತಾಗಿದೆ. ಹೀಗಾಗಿ ಇಬ್ಬರು ಪೊಲೀಸರನ್ನು ಅಮಾನತ್ತಿನಲ್ಲಿಟ್ಟಿದ್ದೇವೆ. 11 ಗಂಟೆ ನಂತರ ಓಡಾಡಬಾರದು ಎಂಬ ಯಾವ ನಿರ್ಬಂಧವೂ ಇಲ್ಲ. ಅನುಮಾನ ಬಂದಾಗಷ್ಟೇ ಮಾಹಿತಿ ಕಲೆ ಹಾಕಿ, ಪರಿಶೀಲಿಸಿ ಕಳುಹಿಸಬೇಕಾಗುತ್ತದೆ. ಆದರೆ ಪೊಲೀಸ್‌ ಸಿಬ್ಬಂದಿ ಹಣ ಪಡೆದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಯಾವುದೇ ಬಿಕ್ಕಟ್ಟಿನಲ್ಲಿ ದಯವಿಟ್ಟು 112ಕ್ಕೆ ಕರೆ ಮಾಡಿ, ಇದು ದಾಖಲಿತ ಕರೆಯಾಗಿದೆ. ಪೊಲೀಸ್ ಇಲಾಖೆಯಲ್ಲಿ ಯಾರೂ ಶಕ್ತಿವಂತರಲ್ಲ ಎಂದು ಮಾಜಿ ಪೊಲೀಸ್‌ ಆಯುಕ್ತ ಹಾಗೂ ರಾಜ್ಯ ಎಎಪಿ ಪಕ್ಷದ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ಟ್ವೀಟ್‌ ಮಾಡಿದ್ದಾರೆ.

kiran

Recent Posts

ಬೈಕ್ ಟಿಪ್ಪರ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…

1 month ago

ಅಪರಿಚಿತ ಕಾರು ಡಿಕ್ಕಿ; ಐವರಿಗೆ ಗಂಭೀರ ಗಾಯ, ಓರ್ವ ಮಹಿಳೆ ಸ್ಥಳದಲ್ಲೇ ಸಾವು.

ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…

1 month ago

ರಸ್ತೆ ಅಪಘಾತ; ಗೊಲಗೇರಿ ಗ್ರಾಮದ ಯುವಕ ಸಾವು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…

1 month ago

ಕುಡಿಯುವ ನೀರಿನ ಬಿಲ್ ಪಾವತಿ ಮಾಡಬೇಡಿ -ಮಾಜಿ ಶಾಸಕ ಹರ್ಷವರ್ಧನ್

ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…

1 month ago

ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…

1 month ago

ಮಟ-ಮಟ ಮಧ್ಯಾಹ್ನ‌ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ ‌

ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…

1 month ago