ಪ್ರೀತಿಸಿದವಳು ಸಿಗಲಿಲ್ಲ ಎಂದು ಆಕೆಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ದುಗ್ಗಮ್ಮ ದೇವಿ ಜಾತ್ರೆಯಲ್ಲಿ ನಡೆದಿದೆ. ಆರೋಪಿ ಮೂಕಪ್ಪನವರ ಹನುಮಂತನ ಎಂಬಾತ ಪ್ರತಿಭಾಳನ್ನ ಪ್ರೀತಿಸುವುದಾಗಿ ಹೇಳಿಕೊಂಡು ಗ್ರಾಮದಲ್ಲಿ ಸುತ್ತುತ್ತಿದ್ದ. ಇದಾದ ಬಳಿಕ ಪ್ರತಿಭಾಳನ್ನ ರಾಣೆಬೆನ್ನೂರಿನ ನಾಗರಾಜ್ ಎಂಬುವವರ ಜೊತೆ ಮದುವೆ ಮಾಡಿಕೊಡಲಾಗಿತ್ತು. ಆಕೆಗೆ ಓರ್ವ ಗಂಡು ಮಗು ಸಹ ಇದೆ.
ಮದುವೆಯಾದ ಬಳಿಕ ಚೆನ್ನಾಗಿ ಜೀವನ ನಡೆಸುತ್ತಿದ್ದ ಪ್ರತಿಭಾ ಚಿಕ್ಕಮ್ಮನ ಊರಿಗೆ ಜಾತ್ರೆಗೆ ಬಂದಿದ್ದಳು. ಇನ್ನೇನು ತನ್ನೂರಿಗೆ ಹೋಗಬೇಕು ಎನ್ನವಷ್ಟರಲ್ಲಿ ಪಾಗಲ್ ಪ್ರೇಮಿ ಹನುಮಂತ ಆಕೆಯನ್ನ ನಡು ರಸ್ತೆಯಲ್ಲಿ ಮನ ಬಂದಂತೆ ದೇಹದ ಬಹುತೇಕ ಭಾಗಳಿಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರಗಾಯಗೊಂಡಿದ್ದ ಮಹಿಳೆಯನ್ನ ಆಸ್ಪತ್ರೆಗೆ ದಾಖಲು ಮಾಡುವ ಮಾರ್ಗಮಧ್ಯಯೇ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. ಈ ಕುರಿತು ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೂಕಪ್ಪನವರ ಹನುಮಂತನನ್ನು ಬಂಧಿಸಲಾಗಿದೆ.