ಮುಂಡಗೋಡ: ತಾಲುಕಿನ ಚಿಗಳ್ಳಿ ಗ್ರಾಮದಲ್ಲಿ ಭಾರತೀಯ ಗಡಿ ಭದ್ರತಾ ಪಡೆ (BSF) ಯಲ್ಲಿ ಸುದೀರ್ಘ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸಿದ ನಿವೃತ್ತ ಯೋಧನಾದ ಶ್ರೀ ಶಂಭುಲಿಂಗ ಶಿವಾಜಪ್ಪ ಕಿರ್ತಪ್ಪನವರ ಅವರಿಗೆ ಗ್ರಾಮದ ಜನತೆ ಅದ್ದೂರಿ ಸ್ವಾಗತ ಕೋರುವುದರ ಮೂಲಕ ಸನ್ಮಾನಿಸಿದರು.
ಗ್ರಾಮದ ಪ್ರವೇಶದಿಂದಲೇ ಯೋಧನನ್ನು ಗ್ರಾಮಸ್ಥರೆಲ್ಲರೂ ಸೇರಿ ಪುಷ್ಪಾರ್ಚನೆ ಮಾಡುವುದರ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದ ಮೂಲಕ ಭವ್ಯ ಮೆರವಣಿಗೆ ಮಾಡಿ ಸಭಾ ಕಾರ್ಯಕ್ರಮಕ್ಕೆ ಕರೆತಂದರು.
ಯೋಧನಿಗೆ ಶ್ರೀಮತಿ ದೇವಕ್ಕ ಛಾಯಪ್ಪ ಕಲಾಲ ಸರಕಾರಿ ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಭಾರತ ಸೇವಾದಳದ ವಿದ್ಯಾರ್ಥಿಗಳು ಸಹ ಪುಷ್ಪಾರ್ಚನೆ ಮಾಡುವುದರ ಮೂಲಕ ಭವ್ಯ ಸ್ವಾಗತ ಕೋರಿದರು.ಎಲ್ಲೆಲ್ಲೂ ವಂದೇ ಮಾತರಂ, ಇಂಕ್ವಿಲಾಬ್ ಜಿಂದಾಬಾದ್, ಬೋಲೋ ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳು ಮೊಳಗುತ್ತಿದ್ದವು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಎಲ್ ಟಿ ಪಾಟೀಲ್ ನಿವೃತ್ತ ಯೋಧನಿಗೆ ಗ್ರಾಮಸ್ಥರೆಲ್ಲರೂ ಸೇರಿ ಇಷ್ಟೊಂದು ಸಂಭ್ರಮದಿಂದ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು .ನಾವಿಂದು ಇಲ್ಲಿ ಇಷ್ಟು ಸಂತೋಷದಿಂದ ಇದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ಯೋಧರ ನಿಸ್ವಾರ್ಥ ಸೇವೆ ಎಂದರು.ನಿವೃತ್ತ ಯೋಧರಾದ ಶಂಭುಲಿಂಗ ಕೀರ್ತೆಪ್ಪನವರ ಸ್ಥಾಪಿಸಲು ಉದ್ದೇಶಿಸಿರುವ “ಸ್ಪೋರ್ಟ್ ಕ್ಲಬ್ಬ್’ ಗೆ ಎಲ್ಲ ರೀತಿಯ ನೇರವು ನೀಡಲು ಸಿದ್ಧವೆಂದು ಹೇಳಿದರು.ನಮ್ಮ ಊರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಕಲಿತು 2022 -23 ನೇ ಸಾಲಿನ ದ್ವಿತೀಯ ಪಿಯುಸಿ ಯಲ್ಲಿ ಶೇಕಡ 95 ಅಂಕ ಗಳಿಸಿ ಸರ್ಕಾರಿ ಕೋಟಾದಲ್ಲಿ MBBS ಗೆ ಆಯ್ಕೆ ಆಗಿರುವ ಕುಮಾರ ನಂದೀಶ್ ಹೂವಪ್ಪನವರ ಅವರಿಗೆ ಕೆಡಿಸಿಸಿ ಬ್ಯಾಂಕ್ ವತಿಯಿಂದ 1 ಲಕ್ಷ ರೂಪಾಯಿಯ ಚೆಕ್ ಅನ್ನು ವಿತರಿಸಿದರು.
ಯೋಧ ಶಂಭುಲಿಂಗ ಕಿರ್ತಪ್ಪನವರ ಮಾತನಾಡಿ ನಾನಿನ್ನು ಹತ್ತು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬಹುದಿತ್ತು, ಆದರೆ ನಾನೊಬ್ಬನೇ ಸೇವೆ ಸಲ್ಲಿಸುತ್ತಿದ್ದೆ ನನ್ನಂತೆ ನೂರಾರು ಯುವಕರು ಸೇನೆಗೆ ಸೇರಬೇಕೆಂಬ ಮಹದಾಸೆಯಿಂದ ನಿವೃತ್ತಿ ಪಡೆದು ಬಂದಿದ್ದೇನೆ ಎಂದ ಅವರು ‘ಸ್ಪೋರ್ಟ್ಸ್ ಕ್ಲಬ್’ ಅನ್ನು ಸ್ಥಾಪಿಸಿ ಯುವಕರಿಗೆ ಉಚಿತವಾಗಿ ಸೈನ್ಯಕ್ಕೆ ಸೇರಲು ತರಬೇತಿ ಕೊಡುವ ಗುರಿಯನ್ನು ಹೊಂದಿದ್ದೇನೆ ಇದರಿಂದ ನೂರಾರು ಯುವಕರು ದೇಶ ಸೇವೆ ಮಾಡಲು ಸಾಧ್ಯವೆಂದು ತಿಳಿಸಿದರು.21 ವರ್ಷಗಳ ಕಾಲ ತಾಯಿ ಭಾರತಾಂಬೆಯ ಸೇವೆ ಮಾಡಿದ ಸಾರ್ಥಕ ಭಾವ ನನ್ನಲ್ಲಿದೆ ಎಂದು ಧನ್ಯತೆಯಿಂದ ನುಡಿದರು.
ಶಿಕ್ಷಕರಾದ ಬಸವರಾಜ ಬೆಂಡ್ಲಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಯೋಧರಿಗೆ ಪ್ರಪಂಚದಲ್ಲಿ ಅತಿ ಹೆಚ್ಚು ಗೌರವ ಕೊಡುವ ದೇಶ ಯಾವುದಾದರೂ ಇದ್ದರೆ ಅದು ನಮ್ಮ ಭಾರತ ದೇಶ ಎಂದು ಹೇಳಿದರು.
ಲಕ್ಷ್ಮಣ ಬನಸೋಡೆ ಮಾತನಾಡಿ ಸೇನೆಯಲ್ಲಿ ಸೇವೆ ಸಲ್ಲಿಸುವುದು ಅಷ್ಟೊಂದು ಸುಲಭದ ಮಾತಲ್ಲ ಎಂದು ಹೇಳುತ್ತಾ ತಾವು ಎರಡು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಈಗಾಗಲೇ ನಿವೃತ್ತಿ ಹೊಂದಿದ ನಾಲ್ಕು ಜನ ಯೋಧರಾದ ಗಣಪತಿ ರವಳಪ್ಪನವರ, ಗಣಪತಿ ಮಟ್ಟಿಮನಿ, ಅಣ್ಣಪ್ಪ ಶಿಗ್ಗಾಂವಿ, ಶ್ರೀಪಾದ ಪಾಟೀಲ್ ಹಾಗೂ ಸೇವೆಯಲ್ಲಿರುವ ನಾಲ್ಕು ಜನ ಯೋಧರಾದ ವಿಷ್ಣು ಜಾದವ,ಅಣ್ಣಪ್ಪ ಬೆಂಡ್ಲಗಟ್ಟಿ, ಹನುಮಂತ ಗಂಟೆಮ್ಮನವರ, ಪರಸಪ್ಪ ಕುಲಗೋಡ ಅವರಿಗೆ ಸನ್ಮಾನಿಸಿ ಭಗತ್ ಸಿಂಗ ಅವರ ಭಾವಚಿತ್ರವನ್ನು ನೀಡಿ ಗೌರವ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಂಭುಲಿಂಗ ಕಿರ್ತಪ್ಪನವರ ಅವರ ತಂದೆ ತಾಯಿಯವರಾದ ಶಿವಾಜಪ್ಪಾ ಕೀರ್ತೆಪ್ಪನವರ, ನಾಗವ್ವ ಕಿರ್ತಪ್ಪನವರ, ರಾಜಶೇಖರ ಹಿರೇಮಠ, ಬಾಬುರಾಯ ಲಾಡನವರ, ಶಂಕರ ಹೊಸೂರು, ಮಂಜುನಾಥ ಹೋತ್ನಳ್ಳಿ, ನಾಮದೇವ ಕ್ಯಾಸನಕೇರಿ, ಕೃಷ್ಣ ಜಾದವ, ರಮೇಶ ತೆಗ್ಗಳ್ಳಿ, ಸಂದೀಪ ಹಾನಗಲ್, ಶಶಿಕುಮಾರ್ ಹೋತ್ನಳ್ಳಿ, ಪಾಂಡುರಂಗ ಕ್ಯಾಮನಕೇರಿ ಸೇರಿದಂತೆ ನೂರಾರು ಯುವಕರು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಕ್ಷಕರಾದ ಕೃಷ್ಣಾ ಲಾಡನವರ ಸ್ವಾಗತಿಸಿದರು,ಸಿದ್ದಲಿಂಗ ಗೌರಣ್ಣನವರ ನಿರೂಪಿಸಿದರು.
ವರದಿ :ಮಂಜುನಾಥ ಹರಿಜನ

error: Content is protected !!