ಮದುವೆಯಾಗಿ 15 ವರ್ಷದ ಮಗಳಿದ್ದರೂ ಬೇರೊಬ್ಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಅನೈತಿಕ ಸಂಬಂಧಕ್ಕೆ ಅನುಕೂಲವಾಗಲೆಂದು ಮಗಳ ಜೀವನವನ್ನೇ ಹಾಳು ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಪುಣೆಯಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಆಕೆಯ ತಾಯಿ ತನ್ನ 28 ವರ್ಷದ ಪ್ರೇಮಿಯೊಂದಿಗೆ ಬಲವಂತವಾಗಿ ವಿವಾಹ ಮಾಡಿದ್ದಾಳೆ. ಅಲ್ಲದೆ, ತನ್ನ ಪ್ರಿಯಕರನೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಳ್ಳಲು ತಾಯಿಯೇ ಮಗಳನ್ನು ಒತ್ತಾಯಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
15 ವರ್ಷದ ಬಾಲಕಿ ತನ್ನ ತಾಯಿ ತನಗೆ ನೀಡುತ್ತಿರುವ ಕಿರುಕುಳದ ಬಗ್ಗೆ ತನ್ನ ಗೆಳತಿಯೊಂದಿಗೆ ಹೇಳಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ವಿಷಯವನ್ನು ಮಹಿಳಾ ಸಾಮಾಜಿಕ ಕಾರ್ಯಕರ್ತೆಯೊಬ್ಬರಿಗೆ ತಿಳಿಸಿದ್ದಾರೆ. ಆಕೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
15 ವರ್ಷದ ಬಾಲಕಿಯೊಂದಿಗೆ ಮದುವೆಯಾದ ಯುವಕ ಆಕೆಯ ತಾಯಿಯ ದೂರದ ಸಂಬಂಧಿಯಾಗಿದ್ದು, ಆತನೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಮಹಿಳೆ ಆತನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದರೆ ಆತ ತನ್ನ ಮನೆಯಲ್ಲೇ ಇರುತ್ತಾನೆ. ಆಗ ತಮ್ಮಿಬ್ಬರ ಅಕ್ರಮ ಸಂಬಂಧದ ಬಗ್ಗೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಈ ರೀತಿ ಮಾಡಿದ್ದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾಳೆ.
ಮಗಳಿಗೆ ಬೆದರಿಕೆ ಹಾಕಿದ ಆ ಮಹಿಳೆ ಈ ಮದುವೆಗೆ ಒಪ್ಪದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಇದರಿಂದ ಹೆದರಿ ಆ ಬಾಲಕಿ ಮದುವೆಗೆ ಒಪ್ಪಿದ್ದಳು. ನವೆಂಬರ್ 6ರಂದು ಆ ಹುಡುಗಿಯನ್ನು ಅಹ್ಮದ್‌ನಗರದ ದೇವಸ್ಥಾನದಲ್ಲಿ ಮದುವೆ ಮಾಡಿಕೊಡಲಾಗಿತ್ತು. ಆ ಯುವಕ ಬಾಲಕಿಯೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ. ಅದಕ್ಕೆ ಆಕೆ ವಿರೋಧಿಸಿದಾಗ ಆಕೆಯ ತಾಯಿ ಹೆದರಿಸಿ ಒಪ್ಪಿಸಿದ್ದಳು ಎಂದು ಹೇಳಲಾಗುತಿದೆ.
36 ವರ್ಷದ ಮಹಿಳೆ ಮತ್ತು ಆಕೆಯ 28 ವರ್ಷದ ಪ್ರೇಮಿಯನ್ನು ಪೋಕ್ಸೊ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.