ಚೀನಾ, ಅಮೆರಿಕ ನಂತರ ಈಗ ಜಪಾನ್ ನಲ್ಲಿ ಏಲಿಯನ್ ಗಳ ಬಗ್ಗೆ ಚರ್ಚೆ ಶುರುವಾಗಿದೆ. ಜಪಾನ್‌ನ ಶಿಜುವೊಕಾ ಪ್ರಾಂತ್ಯದ ಹಮಾಮತ್ಸು ನಗರದ ಕಡಲತೀರದಲ್ಲಿ ಪತ್ತೆಯಾಗಿರುವ ನಿಗೂಢ ಚೆಂಡು ಇದಕ್ಕೆ ಕಾರಣ. ಒಂದೂವರೆ ಮೀಟರ್ ವ್ಯಾಸದ ಚೆಂಡಿನ ಮೇಲೆ ಮಣ್ಣಿನ ಹಲವಾರು ಪದರಗಳನ್ನು ಜೋಡಿಸಲಾಗಿದೆ. ಈ ಚೆಂಡಿನಿಂದಾಗಿ ಸಾಮಾನ್ಯ ಜನರಿಗೆ ಬೀಚ್‌ಗೆ ಪ್ರವೇಶಿಸದಂತೆ ನಿರ್ಭಂಧಿಸಲಾಗಿದೆ. ಈ ಚೆಂಡು ಇಲ್ಲಿಗೆ ಹೇಗೆ ಬಂತು ಎಂಬುದು ಇಲ್ಲಿಯವರೆಗೆ ತಿಳಿದುಬಂದಿಲ್ಲ.
ಇದು ಏಲಿಯನ್ ಅಥವಾ ಏನಾದರೂ ಇರಬಹುದಾ ಎಂದು ಈ ಚೆಂಡನ್ನು ತನಿಖೆ ಮಾಡಲು ಜಪಾನಿನ ಆತ್ಮರಕ್ಷಣಾ ಪಡೆಯ ಬಾಂಬ್ ನಿಷ್ಕ್ರಿಯ ದಳವನ್ನು ನಿಯೋಜಿಸಲಾಗಿದೆ. ಇದುವರೆಗೂ ಅದು ಏನು ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಕೆಲವರು ಇದನ್ನು ಸಮುದ್ರ ಗಣಿ ಎಂದು ಕರೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಇದು ಒಂದು ರೀತಿಯ ಹಾರುವ ತಟ್ಟೆಯಾಗಿರಬಹುದು ಎಂದು ಹೇಳುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ನಿಗೂಢ ಚೆಂಡು ಒಂದೂವರೆ ಮೀಟರ್ ವ್ಯಾಸವಿದ್ದು, ಲೋಹದಿಂದ ಮಾಡಲ್ಪಟ್ಟಿದೆ. ಇದು ಎರಡೂ ಬದಿಗಳಲ್ಲಿ ಕೊಕ್ಕೆಗಳನ್ನು ಹೊಂದಿದೆ. ಈ ಚೆಂಡನ್ನು ಸಮುದ್ರ ತೀರದಲ್ಲಿ ಸಾಗುತ್ತಿದ್ದಾಗ ವ್ಯಕ್ತಿಯೊಬ್ಬರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದು ಎರಡನೇ ಮಹಾಯುದ್ಧದ ಬಾಂಬ್ ಆಗಿರಬಹುದು ಎಂದು ಮೊದಲು ಶಂಕಿಸಲಾಗಿತ್ತು. ಹೀಗಾಗಿ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿದೆ.
ಬಾಂಬ್ ವದಂತಿ ಹರಡಿದಾಗ ಚೆಂಡಿನ ಎಕ್ಸ್-ರೇ ಪರೀಕ್ಷೆಯನ್ನು ಮಾಡಲಾಯಿತು. ಈ ನಿಗೂಢ ಚೆಂಡು ಒಳಗಿನಿಂದ ಟೊಳ್ಳಾಗಿದ್ದು, ಯಾವುದೇ ರೀತಿಯ ಸ್ಫೋಟದ ಅಪಾಯವಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಅದರ ಹಲವು ಚಿತ್ರಗಳನ್ನು ಜಪಾನ್‌ನ ಸ್ವಯಂ ರಕ್ಷಣಾ ಪಡೆ ಮತ್ತು ಕೋಸ್ಟ್ ಗಾರ್ಡ್‌ನೊಂದಿಗೆ ಹಂಚಿಕೊಳ್ಳಲಾಗಿದೆ. ಈ ಚೆಂಡು ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಜಪಾನ್ ಜನರಲ್ಲಿ ಚರ್ಚೆಯ ವಿಷಯವಾಗಿ ಉಳಿದಿದೆ.