
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ತೊಪ್ಪನಹಳ್ಳಿ ಗ್ರಾಮದಿಂದ ಚಾಮನಹಳ್ಳಿ ಗ್ರಾಮದತ್ತ ನಿರ್ಮಿಸಲಾದ ಹೊಸ ಡಾಂಬರ್ ರಸ್ತೆ ಕೇವಲ ಒಂದು ದಿನದಲ್ಲೇ ಹಾನಿಗೊಂಡಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದೇ ದಿನದಲ್ಲಿ ರಸ್ತೆಯಲ್ಲಿ ಗುಂಡಿ!
ಮಾರ್ಚ್ 15, 2025ರಂದು ಈ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ಆದರೆ 16, 2025ರಂದೇ ಹೊಸ ರಸ್ತೆ ನಜ್ಜುಗುಜ್ಜಾಗಿದ್ದು, ಕೆಲವು ಭಾಗಗಳಲ್ಲಿ ಡಾಂಬರ್ ಬೇರ್ಪಟ್ಟಿದೆ. ಹೀಗಾಗಿ ಸ್ಥಳೀಯರು ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಪ್ರತಿಕ್ರಿಯೆ
ಈ ಕುರಿತು ಕೋಲಾರ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಬಂಗಾರಪೇಟೆ ತಾಲೂಕು ಜೂನಿಯರ್ ಇಂಜಿನಿಯರ್ ಶ್ರೀನಿವಾಸ್ ಪ್ರತಿಕ್ರಿಯಿಸಿ, “ನಮಗೆ ಸರ್ಕಾರದಿಂದ ಅನುಮತಿ ಇರುವುದು 20 ಎಂಎಂ ರಸ್ತೆ ಮಾತ್ರ ಹಾಗಾಗಿ ವೊಂದು ಕಡೆ ಮಾತ್ರ ರಸ್ತೆ ಕಿತ್ತುಹೋಗಿರುವುದು ಗಮನಕ್ಕೆ ಬಂದಿದೆ, ಕೆಲವೊಮ್ಮೆ ಇಂತಹ ಘಟನೆ ನಡೆಯುವುದು ಸಹಜ ಕೂಡಲೇ ಸರಿಪಡಿಸಲು ಕಳುಹಿಸಿಕೊಡಲಾಗಿದೆ” ಎಂದು ಹೇಳಿದ್ದಾರೆ.
ಸಾರ್ವಜನಿಕರ ಆಕ್ರೋಶ
ಆದರೆ ಸ್ಥಳೀಯರ ಪ್ರಕಾರ, ಈ ಹೊಸ ರಸ್ತೆಯ ಹಲವು ಭಾಗಗಳಲ್ಲಿ ಬಿರುಕು, ಗುಂಡಿ ಕಾಣಿಸಿಕೊಂಡಿದೆ. ಗುಣಮಟ್ಟವಿಲ್ಲದ ಕಾಮಗಾರಿ, ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದ ಸುತ್ತ ಒತ್ತಿಹೇಳಿದ ಅವರು, ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವರದಿ: ರೋಶನ್