ರಾಯಚೂರು : ಅಕ್ಕಿ ವ್ಯಾಪಾರಿ ಒಬ್ಬರಿಗೆ ಬೆದರಿಕೆವೊಡ್ಡಿ ಐದು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಬೆಂಗಳೂರು ಮೂಲದ 6 ಮಂದಿ ನಕಲಿ ಪತ್ರಕರ್ತರನ್ನು ರಾಯಚೂರು ಪೊಲೀಸರು ಬಂಧಿಸಿರುವುದಾಗಿ ಬುಧವಾರ ಬೆಳಗ್ಗೆ ವರದಿಯಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಬಂಧಿತ ನಕಲಿ ಪತ್ರಕರ್ತರಲ್ಲಿ ಮೂವರು ಮಹಿಳೆ ಹಾಗೂ ಮೂವರು ಪುರುಷರು. ಬಂಧಿತರನ್ನು ರಾಜು ಬಿ, ನಾಗರಾಜ ಸಿ, ಪ್ರದೀಪಗೌಡ, ಅರ್ಪಿತಾ, ಮಹಾದೇವಿ, ಮಘಾ ಎಸ್ ಎಂದು ಗುರುತಿಸಲಾಗಿದೆ. ಆರು ಮಂದಿಯು ಕೂಡ ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಬೆದರಿಕೆ ಹಾಕುತ್ತಿದ್ದರು.ಯೂಟ್ಯೂಬ್ ಚಾನಲ್ ಹೆಸರೇಳಿಕೊಂಡು ಸ್ಥಳೀಯ ಅಕ್ಕಿ ಮಾರಾಟಗಾರರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ. ಅಕ್ಕಿ ವ್ಯಾಪಾರಿ ವೀರೇಶ್ ಎನ್ನುವವರ ಅಂಗಡಿಗೆ ಕ್ಯಾಮೆರಾ ಮತ್ತು ಲೋಗೋ ಹಿಡಿದು ನುಗ್ಗಿದ ಆರೋಪಿಗಳು, ನೀವು ಅಕ್ರಮವಾಗಿ ಪಡಿತರ ಆಹಾರ ಧಾನ್ಯದ ಅಕ್ಕಿ ಮಾರಾಟ ಮಾಡುತಿದ್ದೀರಿ, ನಿಮ್ಮ ಬಗ್ಗೆ ಸುದ್ದಿವಾಹಿನಿಯಲ್ಲಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿದರು.

ಸುದ್ದಿ ಪ್ರಸಾರ ಮಾಡಬಾರದೆಂದರೆ, 5 ಲಕ್ಷ ರೂಪಾಯಿ ಕೊಡಿ ಇಲ್ಲವಾದಲ್ಲಿ ಸುದ್ದಿ ಪ್ರಸಾರ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಆರೋಪಿಗಳ ವರ್ತನೆಯಿಂದ ಅನುಮಾನಗೊಂಡ ವೀರೇಶ್, ಕೂಡಲೇ ಪೊಲೀಸರಿಗೆ ಹಾಗೂ ಸ್ಥಳೀಯ ಪತ್ರಕರ್ತರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಮುದಗಲ್ ಪೊಲೀಸರು ನಕಲಿ ಪತ್ರಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ ಕ್ಯಾಮೆರಾ, ಐಡಿ ಕಾರ್ಡ್ ಹಾಗೂ ಮಾರುತಿ ಸ್ವಿಫ್ಟ್ ಕಾರ್ ಅನ್ನು ಜಪ್ತಿ ಮಾಡಿದ್ದಾರೆ.

error: Content is protected !!