ತಂದೆಯನ್ನೇ ಮಗ ಕೊಲೆ ಮಾಡಿ ದೇಹವನ್ನು ಕತ್ತರಿಸಿ ಬಿಸಾಡಿರುವ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ನಡೆದಿದೆ.
ಮೃತ ವ್ಯಕ್ತಿ ಮಾಜಿ ನೌಕಾಪಡೆಯ ಉಜ್ವಲ್ ಚಕ್ರವರ್ತಿ (55) ಎಂದು ಗುರುತಿಸಲಾಗಿದೆ. ಅನುಮಾನದ ಆಧಾರದ ಮೇಲೆ ಪೊಲೀಸರು ತಾಯಿ-ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಮೃತನ ಪುತ್ರ ಜಾಯ್ ಪಾಲಿಟೆಕ್ನಿಕ್ ಓದುತ್ತಿದ್ದಾನೆ. ಪರೀಕ್ಷಾ ಶುಲ್ಕ್ ತುಂಬಲು 3,000 ರೂಪಾಯಿ ತಂದೆ ಬಳಿ ಕೇಳಿದ್ದಾನೆ. ಉಜ್ವಲ್ ಚಕ್ರವರ್ತಿ ಹಣ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಜಾನ್ ತಂದೆ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಶ್ಯಾಮಲಿ ಮತ್ತು ಮಗ ಜಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ.
12 ವರ್ಷಗಳ ಹಿಂದೆ ಉಜ್ವಲ್ ಚಕ್ರವರ್ತಿ ಅವರು ನೌಕಪಡೆಯಿಂದ ನಿವೃತ್ತಿಯಾಗಿದ್ದರು. ತಂದೆಯನ್ನು ಕೊಲೆಗೈದ ಬಳಿಕ ತಾಯಿಯ ನೆರವಿನೊಂದಿಗೆ ಮೃತದೇಹವನ್ನು ಮಗ ಬಾತ್ ರೂಮ್ ಗೆ ಎಳೆದುಕೊಂಡು ಹೋಗಿದ್ದನು. ಅಲ್ಲಿಯೇ ಆರೋಪಿ ತನ್ನ ಕಾರ್ಪೆಂಟ್ರಿ ಕ್ಲಾಸ್ ಕಿಟ್ ಬ್ಯಾಗ್ ನಿಂದ ಹ್ಯಾಕ್ಸಾ ಬ್ಲೆಡ್ ಅನ್ನು ಬಳಸಿ ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿದ್ದ. ನಂತರ ಅವುಗಳನ್ನು ತನ್ನ ಮನೆಯ 500 ಮೀಟರ್ ದೂರದ ಪ್ರದೇಶದಲ್ಲಿ ಎಸೆದಿದ್ದನು. ಸದ್ಯ ಮೃತದೇಹದ ಭಾಗಗಳಿಗಾಗಿ ಹುಡುಕಾಟ ನಡೆಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.