ಶಿಕ್ಷಕಿಯೊಂದಿಗೆ ಪ್ರೇಮ ವೈಫಲ್ಯದಿಂದ ಮನನೊಂದ ವಿದ್ಯಾರ್ಥಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಅಂಬತ್ತೂರಿನಲ್ಲಿ ಜರುಗಿದೆ.
ಹನ್ನೆರಡನೇ ತರಗತಿ ಮುಗಿಸಿ ವಿದ್ಯಾರ್ಥಿಯು ಕಾಲೇಜು ಪ್ರವೇಶ ಕೌನ್ಸೆಲಿಂಗ್ಗೆ ತೆರಳಿ ಮನೆಗೆ ವಾಪಸ್ ಬಂದಿದ್ದರು. ಆ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಕಂಡ ಪೋಷಕರು ಆತನನ್ನು ರಕ್ಷಿಸಿ ಅಂಬತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಮಾರ್ಗಮಧ್ಯೆದಲ್ಲೇ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾರೆ.
ವಿದ್ಯಾರ್ಥಿಯ ಸಾವಿನ ಬಗ್ಗೆ ಅನುಮಾನಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು, ವಿದ್ಯಾರ್ಥಿಯ ಮೊಬೈಲ್ ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ಹಲವು ಬೆಚ್ಚಿ ಬೀಳಿಸುವ ಸಂಗತಿಗಳು ಹೊರಬಿದ್ದಿವೆ.
ವಿದ್ಯಾರ್ಥಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾಗ ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಶರ್ಮಿಳಾ ಎಂಬುವವರು ಪರಿಚಯವಾಗಿತ್ತು. ಆ ಶಿಕ್ಷಕಿ ನಡೆಸುತ್ತಿದ್ದ ಟ್ಯೂಷನ್ಗೂ ವಿದ್ಯಾರ್ಥಿ ಸೇರಿಕೊಂಡಿದ್ದರು. ನಂತರ ಇವರಿಬ್ಬರ ಪರಿಚಯ ಸ್ನೇಹ ಮತ್ತು ಪ್ರೇಮಕ್ಕೆ ತಿರುಗಿತ್ತು. ಆದರೆ, ಈ ನಡುವೆ ಶಿಕ್ಷಕಿಗೆ ಕುಟುಂಬಸ್ಥರು ಮದುವೆ ನಿಶ್ಚಯ ಮಾಡಿದ್ದರಿಂದ ಶಿಕ್ಷಕಿಯು ವಿದ್ಯಾರ್ಥಿಯೊಂದಿಗಿನ ಎಲ್ಲ ಸಂಪರ್ಕವನ್ನು ಕಡಿತಗೊಳಿಸಿದ್ದರು.
ವಿದ್ಯಾರ್ಥಿಯು ಪದೇ ಪದೇ ಶಿಕ್ಷಕಿಯನ್ನು ತನ್ನೊಂದಿಗೆ ಮಾತನಾಡಲು ಒತ್ತಾಯಿಸಿದ್ದರು. ಆದರೆ, ಶಿಕ್ಷಕಿ ಮಾತನಾಡುತ್ತಿರಲಿಲ್ಲ. ಇದರಿಂದ ಮನನೊಂದ ವಿದ್ಯಾರ್ಥಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಶಿಕ್ಷಕಿ ಶರ್ಮಿಳಾ ಅವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.