ಪ್ರತಿಭಟನೆಗೆ ಬಂದಿದ್ದ ಶಂಕರಪ್ಪ ಬೋರಡ್ಡಿ(47) ಎಂಬ ಶಿಕ್ಷಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಿನ್ನೆ(ಫೆ.22) ರಾತ್ರಿ ನಡೆದಿದೆ. ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರಿಂದ ಪಿಂಚನಿಗಾಗಿ ನಡೆಯುತ್ತಿರುವ ಅನಿರ್ದಿಷ್ಟವಧಿ ಪ್ರತಿಭಟನೆಯಲ್ಲಿ ಭಾಗಿಯಾಗಲು ಶಿಕ್ಷಕ ಶಂಕರಪ್ಪ ಬೆಂಗಳೂರಿಗೆ ಆಗಮಿಸಿದ್ದರು. ಆದ್ರೆ ಪ್ರತಿಭಟನೆಯಲ್ಲಿ ಭಾಗಿಯಾಗಿ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಶಂಕರಪ್ಪ ರಾಯಚೂರು ಜಿಲ್ಲೆಯ ಸಿಂಧನೂರು ಮೂಲದವರು. ಪಟ್ಟಣದಲ್ಲಿ ಗಣಿತ ಶಿಕ್ಷಕರಾಗಿದ್ದರು. ಮಂಗಳವಾರ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಂಕರಪ್ಪ ಪ್ರತಿಭಟನೆ ಬಳಿಕ ಶಿಕ್ಷಕರ ಸದನದಲ್ಲಿ ತಂಗಿದ್ದರು. ಬಳಿಕ ರೂಂನಲ್ಲೆ ಬ್ಯಾಗ್ ಇಟ್ಟು ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಬಳಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಶಿಕ್ಷಕ ಶಂಕರಪ್ಪ ಬೋರಡ್ಡಿ ಮೃತದೇಹ ಊರಿಗೆ ರವಾನಿಸಲಾಗುತ್ತಿದೆ. ಶಂಕರಪ್ಪ, ಇದೇ ಫೆಬ್ರವರಿ 20 ರಂದು ಶಾಲೆ ಮುಗಿಸಿಕೊಂಡು ಬೆಂಗಳೂರಿಗೆ ಪ್ರಯಾಣಿಸಿದ್ದರು. ಬೆಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯ ಮೂಲದ ಬೆಂಗಳೂರಿನಲ್ಲಿರುವ ನಂದಿನಿ ಎನ್ನುವ ಮಹಿಳೆಗೆ 27 ಲಕ್ಷ ಹಣ ನೀಡಿದ್ದರ ಬಗ್ಗೆ ಉಲ್ಲೇಖಿಸಿದ್ದಾರೆ. ಶಂಕರಪ್ಪ, ಸಾಲ ಮಾಡಿ ಮಹಿಳೆಗೆ ಹಣ ನೀಡಿದ್ದ. ಜೊತೆಗೆ ಅನುದಾನಿತ ಶಿಕ್ಷಕರ ಸಮಸ್ಯೆ ಬಗ್ಗೆಯೂ ಉಲ್ಲೇಖಿಸಿದ್ದರು. ಅನುದಾನಿತ ಶಿಕ್ಷಕರಿಗೆ ಪಿಂಚಣಿ ನೀಡುವಂತೆ ಮನವಿ ಮಾಡಿದ್ದಾರೆ.