ಮಾಲೂರು ತಾಲ್ಲೂಕು ದೊಡ್ಡಮಲೆ ಗ್ರಾಮದ ಪೂಜಾ ತನ್ನ ಪಕ್ಕದ ಮನೆಯ ಕಿರಣ್ ಜೊತೆ ಐದು ವರ್ಷಗಳಿಂದ ಪ್ರೀತಿಸಿ ದೈಹಿಕ ಸಂಬಂಧ ಹೊಂದಿದ್ದರು. ವಿಚಾರ ತಿಳಿದ ಪೋಷಕರು ಪೂಜಾಳನ್ನು ಒಂದುವರೆ ವರ್ಷದ ಹಿಂದೆ ಸಾಂಪ್ರದಾಯಿಕವಾಗಿ ತಮಿಳುನಾಡಿನ ಹುಡುಗನ ಜೊತೆ ಮದುವೆ ಮಾಡಿಸಿದ್ದರು. ಕಿರಣ್ ಮಾತು ಕೇಳಿ ಗಂಡನಿಗೆ ವಿಚ್ಛೇದನ ನೀಡಿ ಮರಳಿ ಬಂದ ಪೂಜಾ, ಕಿರಣ್ ಮನೆಗೆ ಬಂದಿದ್ದಳು. ಆದರೆ ಕಿರಣ್ ಹಾಗೂ ಆತನ ಅಪ್ಪ ಅಮ್ಮ ಪೂಜಾಳನ್ನು ಮನೆಗೆ ಕರೆದುಕೊಳ್ಳಲು ನಿರಾಕರಿಸಿದ್ದಾರೆ. ಪೂಜಾಳನ್ನು ತಾನು ಮದುವೆಯಾಗುವುದಿಲ್ಲ ಎಂದು ಕಿರಣ್ ನಿರಾಕರಿಸಿದ್ದಾನೆ.
ಅತ್ತ ಅತ್ತೆ ಮನೆಯೂ ಇಲ್ಲ, ಇತ್ತ ಪ್ರಿಯಕರನ ಮನೆಯೂ ಇಲ್ಲದೆ ಪೂಜಾ ಈಗ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದಾರೆ. ಆತನ ಮನೆಯ ಮುಂದೆ ಯುವತಿ ಧರಣಿ ಕೂತಿದ್ದು, ನ್ಯಾಯ ಸಿಗುವವರೆಗೆ, ಪ್ರಿಯಕರ ಬರುವವರೆಗೂ ಹೋರಾಟ ಎಂದಿದ್ದಾಳೆ. ಪೊಲೀಸರು ಮತ್ತು ಗ್ರಾಮಸ್ಥರ ಸಂಧಾನ ಸಹ ಯಶಸ್ವಿಯಾಗದೆ, ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಿಯಕರ ಕಿರಣ್ ನಾಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಿರಣ್ಗಾಗಿ ಬಲೆ ಬೀಸಿದ್ದಾರೆ.