
ಬೆಂಗಳೂರು: ‘ಬಿಗ್ ಬಾಸ್’ ಖ್ಯಾತಿಯ ನಟ ವಿನಯ್ ಗೌಡ ಮತ್ತು ರಜತ್‌ರನ್ನು ಮಾರಕಾಸ್ತ್ರ ಕಾಯ್ದೆಯಡಿಯಲ್ಲಿ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ನಟ ವಿನಯ್ ಗೌಡ ಹಾಗೂ ರಜತ್, ಲಾಂಗ್ ಹಿಡಿದು ರೀಲ್ಸ್ ಮಾಡಿದ್ದು, ಈ ಕುರಿತು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ವಿಚಾರಣೆಗಾಗಿ ಇವರಿಬ್ಬರೂ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದು, ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ.
ರಜತ್ ಕಿಶನ್ ಜೊತೆ ವಿನಯ್ ಗೌಡ ಈ ರೀಲ್ಸ್ ಮಾಡಿದ್ದಾರೆ. ರೀಲ್ಸ್‌ನಲ್ಲಿ ವಿನಯ್ ಗೌಡ, ಲಾಂಗ್ ಹಿಡಿದು, ಕೂಲಿಂಗ್ ಗ್ಲಾಸ್ ಧರಿಸಿ, ದರ್ಶನ್ ಅವರ ‘ಕರಿಯ’ ಸಿನಿಮಾದ ಶೈಲಿಯಲ್ಲಿ ಸ್ಲೋ ಮೋಷನ್‌ನಲ್ಲಿ ನಡೆಯುತ್ತಿರುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.
ಬಸವೇಶ್ವರ ನಗರದಲ್ಲಿ ಸಾರ್ವಜನಿಕವಾಗಿ ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀತಿಯ ರೀಲ್ಸ್ ಮಾಡಿರುವುದು ಸಮಸ್ಯೆಗೆ ಕಾರಣವಾಗಿದೆ. ಈ ವಿಡಿಯೋವನ್ನು ‘ಬುಜ್ಜಿ’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದೆ.