ಟ್ರಾಫಿಕ್ ಜಾಮ್ನಲ್ಲಿ ಕಾರು ಸಿಲುಕಿಕೊಂಡಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬಿಟ್ಟು ಪರಾರಿಯಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫೆ. 16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪರಾರಿಯಾದವನ ಹೆಸರು ವಿಜಯ್ ಜಾರ್ಜ್. ಮಾಜಿ ಪ್ರೇಯಸಿಯ ಬೆದರಿಕೆಗೆ ಹೆದರಿ ಪತ್ನಿಯನ್ನು ಬಿಟ್ಟು ಓಡಿದ್ದಾನೆಂದು ತಿಳಿದುಬಂದಿದೆ. ಮದುವೆ ನಡೆದ ಮರುದಿನವೇ ಈ ಘಟನೆ ಮಹದೇವಪುರದಲ್ಲಿ ನಡೆದಿದೆ. ಮದುವೆ ಮುಗಿಸಿ ಚರ್ಚ್ನಿಂದ ಮನೆಗೆ ಮರಳುತ್ತಿದ್ದರು. ಈ ವೇಳೆ ಕಾರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಿತು. ಈ ವೇಳೆ ಕಾರಿನಿಂದ ಕೆಳಗೆ ಇಳಿದು ಜಾರ್ಜ್ ಎಸ್ಕೇಪ್ ಆಗಿದ್ದು, ಆತನಿಗಾಗಿ ಪೊಲೀಸರು ಕಳೆದ ಎರಡು ವಾರಗಳಿಂದ ಹುಡುಕಾಟ ನಡೆಸುತ್ತಿದ್ದಾರೆ. ವಿಜಯ್, ಈ ಹಿಂದೆ ಮಹಿಳೆಯೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದ. ತನ್ನ ತಂದೆಯ ಕಂಪನಿಯಲ್ಲಿ ಕೆಲಸ ಮಾಡುವ ಆಟೋ ಚಾಲಕನ ಪತ್ನಿಯೊಂದಿಗಿ ಜಾರ್ಜ್, ಲವ್ವಿಡವ್ವಿ ಇಟ್ಟುಕೊಂಡಿದ್ದ. ಮಹಿಳೆ ಇಬ್ಬರು ಮಕ್ಕಳಿದ್ದು ಅದೇ ಕಂಪನಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಳು.
ಯಾವಾಗ ಇಬ್ಬರ ಬಗ್ಗೆ ಕುಟುಂಬಕ್ಕೆ ತಿಳಿಯಿತೋ ಆಗ ಸಂಬಂಧವನ್ನು ಮುರಿದುಕೊಂಡು ಮದುವೆ ಆಗಲು ಜಾರ್ಜ್ ನಿರ್ಧಾರ ಮಾಡಿದ. ಮದುವೆಗು ಮುನ್ನ ವಿಜಯ್, ತನ್ನ ತಪ್ಪನ್ನು ಪತ್ನಿಯ ಮುಂದೆ ಹೇಳಿಕೊಂಡಿದ್ದ. ಎಲ್ಲವನ್ನು ಕ್ಷಮಿಸಿ ಆತನನ್ನು ಮದುವೆ ಆಗಿದ್ದಳು. ಆದರೆ, ಬೇರೊಬ್ಬಳನ್ನು ಮದುವೆ ಆದರೆ, ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಡುವುದಾಗಿ ಮಾಜಿ ಪ್ರೇಯಸಿ ಬೆದರಿಸುತ್ತಿದ್ದಳು. ಇದರಿಂದ ಜಾರ್ಜ್ ತುಂಬಾ ಒತ್ತಡಕ್ಕೆ ಒಳಗಾಗಿದ್ದ.
ಜಾರ್ಜ್ ಪತ್ನಿ ಘಟನೆಯ ಬಗ್ಗೆ ಮಾತನಾಡಿ, ಚರ್ಚ್ನಿಂದ ಮನೆಗೆ ಬರುವಾಗ ಕಾರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಿತು. ಈ ವೇಳೆ ಜಾರ್ಜ್ ಕಾರಿನ ಬಾಗಿಲು ತೆರೆದು ಓಡಿ ಹೋದ. ಇದನ್ನು ನೋಡಿ ನಾನು ಆಘಾತಕ್ಕೆ ಒಳಗಾದೆ. ಆತನನ್ನು ಹಿಂಬಾಲಿಸಲು ಯತ್ನಿಸಿದೆ. ಆದರೆ, ಆತ ಸಿಗಲಿಲ್ಲ. ಆತನ ಪರವಾಗಿ ನಿಲ್ಲುವುದಾಗಿ ನಾನು ಮತ್ತು ನನ್ನ ಕುಟುಂಬದವರು ಭರವಸೆ ನೀಡಿದ್ದೆವು. ಆದರೂ ಆತ ಓಡಿ ಹೋಗಿದ್ದಾನೆ. ಅವರ ಸುರಕ್ಷಿತವಾಗಿದ್ದಾರೆ ಮತ್ತು ಮರಳಿ ಬರುತ್ತಾರೆ ಎಂದು ಭಾವಿಸಿದ್ದೇನೆ ಎಂದು ಜಾರ್ಜ್ ಪತ್ನಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.