ಚಳ್ಳಕೆರೆ ಠಾಣೆಯ ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ಚಿತ್ರದುರ್ಗ ನಗರದ ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಐದು ವರ್ಷಗಳ ಹಿಂದೆ ಉಮೇಶ್ ದಾವಣಗೆರೆಯಲ್ಲಿ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ದಾವಣಗೆರೆಯಲ್ಲಿ ನಿವೇಶನದ ಸಮಸ್ಯೆ ಹಿನ್ನೆಲೆ ಸಹಾಯ ಕೇಳಿದ್ದೆವು. ಆಗ ದಾವಣಗೆರೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದರು. ಬಳಿಕ ಮತ್ತೆ ಕರೆದಾಗ ಹೋಗದಿದ್ದಕ್ಕೆ ಶಿವಮೊಗ್ಗಕ್ಕೆ ಬಂದು ಬಲತ್ಕಾರ ಮಾಡಿದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಆರೋಪಿ ಉಮೇಶ್ ಸಂತ್ರಸ್ತ ಯುವತಿಗೆ ಸೋದರ ಸಂಬಂಧಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಶಿವಮೊಗ್ಗದಲ್ಲಿ ಯುವತಿ ಬಿಇಡಿ ಓದುತ್ತಿದ್ದ ಸಂದರ್ಭದಲ್ಲಿ ಅತ್ಯಾಚಾರ ನಡೆದಿದ್ದು, ಐದು ಸಲ ಯುವತಿಗೆ ಗರ್ಭಪಾತ ಮಾಡಿಸಿರುವ ಆರೋಪ ಕೇಳಿಬಂದಿದೆ. ಅಂದಹಾಗೆ ಸಿಪಿಐ ಉಮೇಶ್ಗೆ ಎರಡು ಮದುವೆಯಾಗಿ ಇಬ್ಬರು ಹೆಂಡತಿಯರು ಇದ್ದಾರಂತೆ. ಇದೀಗ ಸಂತ್ರಸ್ತೆಯನ್ನು ಮೂರನೇ ಹೆಂಡತಿಯಂತೆ ನನ್ನೊಂದಿಗೆ ಇರು ಎಂದು ಸಂತ್ರಸ್ತ ಯುವತಿಗೆ ಉಮೇಶ್ ಒತ್ತಾಯಿಸುತ್ತಿದ್ದನು ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.
ಸಂತ್ರಸ್ತೆ ಉಮೇಶ್ ಮಾತಿಗೆ ಒಪ್ಪದಿದ್ದಾಗ ನಿಮ್ಮ ತಂದೆ ತಾಯಿಯ ಬದುಕು ಬೀದಿಗೆ ತರುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುವ ಆರೋಪ ಕೂಡ ಕೇಳಿ ಬಂದಿದೆ. ಯುವತಿಯ ದೂರಿನ ಹಿನ್ನೆಲೆಯಲ್ಲಿ 376 ಕ್ಲಾಸ್ (2)(k)(n), 323 , 504, 506 ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಯುವತಿ ದೂರು ನೀಡುತ್ತಿದ್ದಂತೆ ಸಿಪಿಐ ಉಮೇಶ್ ತಲೆಮರೆಸಿಕೊಂಡಿದ್ದಾನೆ.
ಅತ್ಯಾಚಾರ ಮತ್ತು ಜೀವ ಬೆದರಿಕೆ ಆರೋಪ ಹಿನ್ನೆಲೆಯಲ್ಲಿ ಸಿಪಿಐ ಉಮೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ದಾವಣಗೆರೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಆದೇಶಿಸಿದ್ದಾರೆ.