
ಬೆಳಕವಾಡಿ: ಸರ್ಕಾರಿ ಪಡಿತರ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣದಲ್ಲಿ ಬೆಳಕವಾಡಿ ಪೊಲೀಸರು ಶನಿವಾರ ರಾತ್ರಿ ಆಟೋ ಚಾಲಕನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಿವಾಸಿ ದಿಲೀಪ್ ಕುಮಾರ್ ಎಂದು ಗುರುತಿಸಲಾಗಿದೆ.
ತಲಕಾಡು ಭಾಗದಿಂದ ಬಿಳಿಜಗಲಿ ಮೊಳೆ ಮಾರ್ಗವಾಗಿ ಕಿರುಗಾವಲಿಗೆ ಪ್ಯಾಸೆಂಜರ್ ಆಟೋ ಮೂಲಕ ಅಕ್ಕಿ ಸಾಗಿಸಲಾಗುತ್ತಿತ್ತು. ಸಂಶಯಾಸ್ಪದವಾಗಿ ತಪಾಸಣೆ ನಡೆಸಿದಾಗ, 40-50 ಕೆ.ಜಿ. ತೂಕದ 15 ಚೀಲಗಳಲ್ಲಿ ಭರ್ತಿಯಾದ ಪಡಿತರ ಅಕ್ಕಿ ಪತ್ತೆಯಾಗಿದೆ. ತಾಲ್ಲೂಕು ಕಚೇರಿ ಆಹಾರ ನಿರೀಕ್ಷಕ ಬಿ. ಅಶ್ವತ್ಥ್ ಹಾಗೂ ಪೊಲೀಸರ ತಂಡ ಈ ಕಾರ್ಯಾಚರಣೆಯನ್ನು ನಡೆಸಿದ್ದು, ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.