ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾವುತಪ್ಪ ವಾಲಿಕಾರ್ ಬಂಧಿತ ಆರೋಪಿ, ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್ ಡಿ ಪಾಟೀಲ್ ಸಹಚರನಾದ ಇವನು ಹಲವು ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದಾನೆಂದು ತಿಳಿದುಬಂದಿದೆ.ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ರಾವುತಪ್ಪ, ಚಿತ್ತಾಪುರ ತಾಲೂಕಿನ ಗುಂಡಗುರ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಾಸ್ಟೆಲ್ ವಾರ್ಡನ್ ಆಗಿ ಸೇವೆ ಸಲ್ಲಿಸುತ್ತಿದ್ದ. ಪಿಎಸ್ಐ ಅಕ್ರಮ ಪ್ರಕರಣ ಹೊರಬೀಳುತ್ತಿದ್ದಂತೆ ನಾಪತ್ತೆಯಾಗಿದ್ದ ಈತನನ್ನು ಪತ್ತೆ ಮಾಡಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಆರ್.ಡಿ.ಪಾಟೀಲ್ ಹಾಗೂ ರಾವುತಪ್ಪ ಒಂದೆ ಊರಿನವರಾಗಿದ್ದು, ಆರ್ ಡಿ ಪಾಟೀಲ ಜೊತೆಗೆ ಸೇರಿ ಅನೇಕ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದಾನೆಂದು ತಿಳಿದುಬಂದಿದೆ. ಅಭ್ಯರ್ಥಿಗಳಿಗೆ ಬ್ಲೂಟೂತ ನಲ್ಲಿ ತಾನೇ ಉತ್ತರ ಹೇಳುವ ಕೆಲಸ ಕೂಡಾ ಮಾಡುತ್ತಿದ್ದನೆಂದು ಹೇಳಲಾಗಿದೆ. ನಗರದ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ರಾವುತಪ್ಪ ಬ್ಲೂಟೂತ್ ಬಳಸಿ ಉತ್ತರ ಹೇಳುವ ಮೂಲಕ ಅಭ್ಯರ್ಥಿಗಳು ಪಾಸ್ ಆಗಲು ಸಹಕರಿಸಿದ್ದ, ಲೋಕೋಪಯೋಗಿ ಇಲಾಖೆಯ ಎ.ಇ, ಜೆ.ಇ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯು ಅಭ್ಯರ್ಥಿಗಳಿಗೆ ಅಕ್ರಮವಾಗಿ ಉತ್ತರಗಳನ್ನು ಹೇಳಿದ್ದನಂತೆ, ಇದೀಗ ಸಿಐಡಿ ಅಧಿಕಾರಿಗಳು ರಾವುತಪ್ಪ ನನ್ನ ಬಂಧಿಸಿದ್ದಾರೆ.