ಸಾಕ್ಷಿ ಕಲೆ ಹಾಕುವ ಸಂದರ್ಭದಲ್ಲಿ ಪೊಕ್ಸೊ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಟಿಜಿ ಬಾಬು ನಿರೀಕ್ಷಣಾ ಜಾಮೀನು ನೀಡಲು ಕೇರಳದ ಕಲ್ಪೆಟಾದಲ್ಲಿರುವ ಪೊಕ್ಸೊ ನ್ಯಾಯಾಲಯ ನಿರಾಕರಿಸಿದೆ. ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಎಎಸ್ಐ ಬಾಬು ಪರಾರಿಯಾಗಿದ್ದು, ಈವರೆಗೂ ಪೊಲೀಸರು ಆತನ ಸುಳಿವು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿಲ್ಲ.
ಈ ಘಟನೆ ಕಳೆದ ಅಕ್ಟೋಬರ್ 26ರಂದು ನಡೆದಿದೆ. ಅಂಬಾಲವಯಾಲ್ ಪೊಲೀಸರು ಸಂತ್ರಸ್ತ ಬಾಲಕಿಯನ್ನು ಸಾಕ್ಷಿ ಕಲೆ ಹಾಕಲೆಂದು ಊಟಿಗೆ ಕರೆದೊಯ್ಯಲಾಗಿತ್ತು. ಸಾಕ್ಷಿ ಕಲೆಹಾಕಿದ ಬಳಿಕ ಆಕೆಯನ್ನು ವಾಪಸ್ ಕರೆತರುವಾಗ ಎಎಸ್ಐ ಬಾಬು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ದೂರು ನೀಡಿರುವ ಬಾಲಕಿ, ಎಎಸ್ಐ ಬಾಬು ಅವರು ನನ್ನನ್ನು ಪಕ್ಕಕ್ಕೆ ಎಳೆದುಕೊಂಡು ದೌರ್ಜನ್ಯ ಎಸಗಿದರು. ಅಲ್ಲದೆ, ತಮ್ಮ ಮೊಬೈಲ್ನಲ್ಲಿ ಫೋಟೋವನ್ನು ತೆಗೆದುಕೊಂಡರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಪೊಕ್ಸೊ ಮಾತ್ರವಲ್ಲದೆ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಬಾಬು ವಿರುದ್ಧ ಪ್ರಕರಣ ದಾಖಲಿಸಲಾಗಿದೆ.