
ಶಿರಸಿ: ಜಮೀನು ವ್ಯಾಜ್ಯದ ವಿಷಯವಾಗಿ ವ್ಯಕ್ತಿಯೊಬ್ಬರ ಕೊಲೆಗೆ ಪ್ರಯತ್ನಿಸಿದ ಆರೋಪಿ ಪರಮೇಶ್ವರ ಪಿಳ್ಳೆ ಅಪರಾಧಿ ಎಂದು ಸಾಭೀತಾಗಿದೆ. ಈ ಹಿನ್ನಲೆ ನ್ಯಾಯಾಲಯ ಪರಮೇಶ್ವರ ಪಿಳ್ಳೆ ಅವರಿಗೆ ಶಿಕ್ಷೆಯನ್ನು ಪ್ರಕಟಿಸಿದೆ.
ಶಿರಸಿ ಮರಾಠಿಕೊಪ್ಪದ ನಿವಾಸಿ ಪರಮೇಶ್ವರ ಕನ್ನಾ ಪಿಳ್ಳೆ ಹಾಗೂ ಈಶ್ವರ ಕೃಷ್ಣಾ ದೇವಾಡಿಗ ನಡುವೆ ವೈಮನಸ್ಸಿತ್ತು. ಭೂ ವಿಷಯವಾಗಿ ಶುರುವಾದ ದ್ವೇಷ ತಾರಕಕ್ಕೇರಿದ್ದು, ಪರಮೇಶ್ವರ ಪಿಳ್ಳೆ ಅವರು ಈಶ್ವರ ದೇವಾಡಿಗ ಅವರನ್ನು ಕೊಲೆ ಮಾಡುವ ಪ್ರಯತ್ನ ನಡೆಸಿದ್ದರು. ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿ ತನಿಖೆ ನಡೆಯಿತು. ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಸರ್ಕಾರಿ ಅಭಿಯೋಜಕ ರಾಜೇಶ ಎಂ ಮಳಗಿಕರ್ ಅವರು ಈಶ್ವರ ದೇವಾಡಿಗ ಅವರ ಪರವಾಗಿ ವಕಾಲತು ಮಾಡಿದರು. ಕೊಲೆ ಯತ್ನ ನಡೆದ ಅವಧಿಯಲ್ಲಿ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿದ್ದ ಪಿಎಸ್‌ಐ ಭೀಮಾಶಂಕರ ಸಿನ್ನೂರ್ ಸಂಗಣ್ಣ ಅವರು ನೀಡಿದ ವರದಿ ಹಾಗೂ ದಾಖಲೆಗಳ ಬಗ್ಗೆ ನ್ಯಾಯಾಲಯಕ್ಕೆ ಮನವರಕೆ ಮಾಡಿದರು. ಪಿಎಸ್‌ಐ ರತ್ನಾ ಕುರಿ, ಪೊಲೀಸ್ ಸಿಬ್ಬಂದಿ ಹನುಮಂತ ರಾಜಪ್ಪ ಬೋವಿ ಹಾಗೂ ರಮೇಶ ಮುಚ್ಚಂಡಿ ಅವರು ನ್ಯಾಯಾಲಯಕ್ಕೆ ಪ್ರಮುಖ ದಾಖಲಾತಿ ಒದಗಿಸಿದರು.ವಾದ ಆಲಿಸಿದ ನ್ಯಾಯಾಲಯ ಜಮೀನು ಪಾಲಿನ ವಿಷಯದಲ್ಲಿ ನಡೆದ ಜಗಳದಲ್ಲಿ ಈಶ್ವರ ದೇವಾಡಿಗ ಅವರಿಗೆ ಪರಮೇಶ್ವರ್ ಪಿಳ್ಳೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದು ಸತ್ಯ ಎಂದು ಘೋಷಿಸಿತು. ಪರಮೇಶ್ವರ ಪಿಳ್ಳೆ ಅವರಿಗೆ 5 ಸಾವಿರ ರೂ ದಂಡವನ್ನು ವಿಧಿಸಿದ್ದು, ತಪ್ಪಿದರೆ ಜೈಲು ಶಿಕ್ಷೆ ವಿಧಿಸುವುದಾಗಿ ಎಚ್ಚರಿಸಿತು.