ಆರು ಅಂಕಿಗಳ ಕೋಡ್ ಇಲ್ಲದೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳು ಮತ್ತು ಚಿನ್ನದ ಕಲಾಕೃತಿಗಳ ಮಾರಾಟವನ್ನು ಏಪ್ರಿಲ್ 1 ರಿಂದ ನಿಷೇಧಿಸಲಾಗುವುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದು, ಮೈಕ್ರೋ ಸೇಲ್ ಘಟಕಗಳಲ್ಲಿ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಏಪ್ರಿಲ್ 1, 2023 ರಿಂದ HUID ಹೊಂದಿರುವ ಚಿನ್ನದ ಆಭರಣಗಳ ಮಾರಾಟವನ್ನು ಮಾತ್ರ ಅನುಮತಿಸಲಾಗುವುದು.
2023 ರ ಮಾರ್ಚ್ 3 ರಂದು ಕೇಂದ್ರ ಕ್ಯಾಬಿನೆಟ್ ಸಚಿವ ಪಿಯೂಷ್ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನ ಪರಿಶೀಲನಾ ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 4 ಅಂಕಿ ಮತ್ತು 6 ಅಂಕಿಗಳ ಹಾಲ್‌ಮಾರ್ಕಿಂಗ್ ಕುರಿತು ಗ್ರಾಹಕರಲ್ಲಿ ಉಂಟಾಗಿರುವ ಗೊಂದಲವನ್ನು ಹೋಗಲಾಡಿಸಲು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.