ವಿಜಯಪುರ: ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದರ ಪರಿಣಾಮ ವಿಜಯಪುರ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಪಕ್ಷದ ಶಿಸ್ತು ಸಮಿತಿಯ ಶೋಕಾಸ್ ನೋಟಿಸ್‌ಗೆ ಉತ್ತರಿಸದೆ, ಸ್ವಪಕ್ಷದ ನಾಯಕರ ವಿರುದ್ಧ ಹರಿಹಾಯ್ದ ಯತ್ನಾಳ್ ಅವರಿಗೆ ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿ ಕಠಿಣ ಕ್ರಮ ಕೈಗೊಂಡಿದ್ದು, ಅವರ ಮೇಲೆ ಆರು ವರ್ಷಗಳ ಉಚ್ಚಾಟನೆಯ ಶಿಕ್ಷೆ ವಿಧಿಸಲಾಗಿದೆ.

ರಾಜೀನಾಮೆ ಪರ್ವ: ಪಕ್ಷಕ್ಕೆ ಬಿರುಕು

ಯತ್ನಾಳ್ ಪಕ್ಷದಿಂದ ಹೊರಗಾಕಲ್ಪಟ್ಟ ಬೆನ್ನಲ್ಲೇ ವಿಜಯಪುರದಲ್ಲಿ ಬಿಜೆಪಿ ನಾಯಕರ ರಾಜೀನಾಮೆ ಪರ್ವ ಆರಂಭವಾಗಿದೆ. ನಿನ್ನೆ ಪಕ್ಷದ ಹಲವಾರು ಮುಖಂಡರು ಮತ್ತು ಪದಾಧಿಕಾರಿಗಳು ವಿವಿಧ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದು, ಭಿನ್ನಮತೀಯರು ಯತ್ನಾಳ್ ಅವರಿಗೆ ನೇರ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಜಯಪುರ ಬಿಜೆಪಿ ಶಾಖೆಯಲ್ಲಿ ಈ ಬೆಳವಣಿಗೆಯು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಅಪಘಾತದಲ್ಲಿ ಬಿಜೆಪಿ ಕಾರ್ಯಕರ್ತನ ದುರ್ಮರಣ

ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗುತ್ತಿದ್ದಂತೆಯೇ, ವಿಜಯಪುರದಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ. ಬಿಜೆಪಿ ನಗರ ಎಸ್‌ಟಿ ಮೋರ್ಚಾದ ಕಾರ್ಯದರ್ಶಿ ಸಂತೋಷ್ ತಟಗಾರ ಅಪಘಾತದಲ್ಲಿ ಸಾವನ್ನಪ್ಪಿರುವುದು ಶೋಕದ ವಾತಾವರಣ ಸೃಷ್ಟಿಸಿದೆ. ನಿನ್ನೆ ರಾಜೀನಾಮೆ ನೀಡಿದ್ದ ಸಂತೋಷ್, ಇಂದು ಬೆಳಿಗ್ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಅವರ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಸಂತೋಷ್ ತಟಗಾರ ಸಾವಿನ ಸುದ್ದಿ ನಗರದಲ್ಲಿ ತೀವ್ರ ಆಘಾತ ಉಂಟುಮಾಡಿದ್ದು, ಈ ಘಟನೆಯ ಹಿಂದಿನ ಕಾರಣಗಳ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆಯೇ, ಯತ್ನಾಳ್ ಉಚ್ಚಾಟನೆಯ ಪರಿಣಾಮ ಹಾಗೂ ವಿಜಯಪುರ ಬಿಜೆಪಿ ಭವಿಷ್ಯದ ರಾಜಕೀಯ ತಿರುಳನ್ನು ಅರ್ಥಮಾಡಿಕೊಳ್ಳಲು ರಾಜಕೀಯ ವಲಯ ಕಾದು ಕುಳಿತಿದೆ.

error: Content is protected !!