ತೀರ್ಥಹಳ್ಳಿಯಲ್ಲಿ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಸೃಜನ್ ಆಗಾಗ ಕೊಪ್ಪಗೆ ಹಣ ವಸೂಲಿಗೆಂದು ಹೋಗುತ್ತಿದ್ದ. ಈ ವೇಳೆ ನರ್ಸಿಂಗ್ ಓದುತ್ತಿದ್ದ ಸೌಮ್ಯಾಳ ಪರಿಚಯವಾಗಿದೆ. ಈ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿದೆ. ಆದರೆ ಇಬ್ಬರದ್ದು ಬೇರೆ ಬೇರೆ ಸಮುದಾಯವಾಗಿದ್ದರಿಂದ ಸೃಜನ್ ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದಾರೆ. ಇತ್ತ ಸೌಮ್ಯ ತಮ್ಮ ಪೋಷಕರ ಬಳಿ ತೀರ್ಥಹಳ್ಳಿಗೆ ಹೋಗುತ್ತೇನೆ ಎಂದು ಜುಲೈ 2 ರಂದು ಹೊರಟಿದ್ದಾಳೆ. ಅಂತೆಯೇ ತೀರ್ಥಹಳ್ಳಿಗೆ ಬಂದ ಸೌಮ್ಯಾ ತನ್ನ ಪ್ರಿಯತಮನನ್ನು ಭೇಟಿಯಾಗಿ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾಳೆ. ಈ ವೇಳೆ ಸೃಜನ್, ನಮ್ಮ ಮನೆಗೆ ಈಗ ಬರಬೇಡ, ನಿಮ್ಮ ಮನೆಗೆ ವಾಪಸ್ ಹೋಗು ಎಂದು ಮನವೊಲಿಸುವ ಪ್ರಯತ್ನ ಮಾಡಿದ್ದಾನೆ.
ಆದರೆ ಸೃಜನ್ ಮಾತನ್ನು ಕೇಳದ ಸೌಮ್ಯಾ ಮತ್ತೆ ಆತನನ್ನು ಪೀಡಿಸಿದ್ದಾಳೆ. ಹೀಗಾಗಿ ಸೃಜನ್ ಆಕೆಯನ್ನು ಸಮಾಧಾನಪಡಿಸಲೆಂದು ತೀರ್ಥಹಳ್ಳಿಯಿಂದ ಹೆದ್ದಾರಿಪುರಕ್ಕೆ ಕರೆದುಕೊಂಡು ಬಂದಿದ್ದಾನೆ. ತನ್ನನ್ನು ಸೃಜನ್ ಮದುವೆ ಆಗಲ್ಲವೆಂದು ಅನುಮಾನ ವ್ಯಕ್ತಪಡಿಸಿದ್ದಾಳೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ರೊಚ್ಚಿಗೆದ್ದ ಸೃಜನ್, ಸೌಮ್ಯ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಕತ್ತು ಹಿಸುಕಿದ್ದು, ಪರಿಣಾಮ ಆಕೆ ಸ್ಥಳದಲ್ಲೇ ಅಸುನೀಗಿದ್ದಾಳೆ. ಇನ್ನು ಸೌಮ್ಯಾ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಸೃಜನ್ ಗಾಬರಿಯಾಗಿದ್ದಾನೆ. ಅಲ್ಲದೇ ಕೂಡಲೇ ಶವವನ್ನು ಮುಂಬಾಳು ಬಳಿ ಹೂತಿಟ್ಟಿದ್ದಾನೆ. ಇತ್ತ ತೀರ್ಥಹಳ್ಳಿಗೆ ಹೋದ ಸೌಮ್ಯಾ ವಾಪಸ್ ಬರದೇ ಇರುವುದರಿಂದ ಆಕೆಯ ಪೋಷಕರು ಆತಂಕಗೊಂಡು ಕೊಪ್ಪ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಯುವಕನನ್ನು ಹುಡುಕಿಕೊಂಡು ಸಾಗರಕ್ಕೆ ಬಂದಿದ್ದಾರೆ. ಈ ವೇಳೆ ಸೃಜನ್ ಬಣ್ಣ ಬಯಲಾಗಿದೆ.