
ಬೆಂಗಳೂರು: ಅನೇಕಲ್‌ನಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಆರ್ಥಿಕ ವಂಚನೆ ಮತ್ತು ಮಾನಸಿಕ ಕಿರುಕುಳದಿಂದ ತತ್ತರಿಸಿ ಜೀವನದ ಕ್ಷಣಿಕ ನಿರ್ಣಯ ಮಾಡಿಕೊಂಡ ದುರ್ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಖಾಸಗಿ ಶಾಲೆಯೊಂದರ ಬಳಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಈ ಘಟನೆ ಸ್ಥಳೀಯರಲ್ಲಿ ಆಘಾತ ಉಂಟುಮಾಡಿದೆ.
ಮೃತ ಯುವಕನನ್ನು ಪ್ರವೀಣ್ ಗೌಡ ಬೇಲೂರು (35) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಮುನ್ನ ಫೇಸ್‌ಬುಕ್‌ನಲ್ಲಿ ಆತ ಸ್ವಪಕ್ಷದ ಕೆಲವರು ತಾನು ಅನುಭವಿಸಿದ ಅನ್ಯಾಯಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ವೀಡಿಯೋ ಸಂದೇಶವೊಂದನ್ನು ಅಪ್‌ಲೋಡ್ ಮಾಡಿದ್ದಾನೆ.
ವೀಡಿಯೋದಲ್ಲಿ ಸಮಂದರ್ ಕಿರಣ್, ಗೋಕುಲ್ ಫ್ಯಾಷನ್ ಹರೀಶ್, ಭಾಸ್ಕರ್ ನಾರಾಯಣಪ್ಪ, ದೊಡ್ಡಹಾಗಡೆ ಮಧುಗೌಡ ಹಾಗೂ ಸರವಣ ಎಂಬುವವರು ತಾನು ಅನುಭವಿಸಿದ ಕಿರುಕುಳ ಹಾಗೂ ಹಣ ವಂಚನೆಗೆ ಹೊಣೆಗಾರರು ಎಂದು ತಿಳಿಸಿದ್ದಾನೆ. “ಕಳೆದ ಎರಡು ತಿಂಗಳಿನಿಂದ ತೀವ್ರ ಮಾನಸಿಕ ಒತ್ತಡ ಅನುಭವಿಸುತ್ತಿದ್ದೇನೆ. ಕಿರಣ್ ಗೌಡನನ್ನು ಮಾತ್ರ ತಪ್ಪಿಸಬಾರದು” ಎಂದು ಕಳವಳಭರಿತ ಮನವಿಯನ್ನೂ ಮಾಡಿದಿದ್ದಾರೆ.
ಅಲ್ಲದೆ, ಕಿರಣ್ ಗೌಡ ಮಹಿಳೆಯರಿಗೆ ಅಹಿತಕರ ರೀತಿಯಲ್ಲಿ ಕರೆಮಾಡಿ ಕಿರುಕುಳ ನೀಡುತ್ತಿದ್ದಾನೆ ಮತ್ತು ತನ್ನ ಮೇಲೆಯೂ ಅನಾಚಾರ ವರ್ತನೆ ತೋರಿದ್ದಾನೆ ಎಂದು ಆರೋಪಿಸಿದ್ದಾನೆ. ಹಣ ಹಿಂತಿರುಗಿಸುವ ನೆಪದಲ್ಲಿ ಭೇಟಿಗೆ ಕರೆದೊಯ್ದು ಹಲ್ಲೆಗೊಳಪಡಿಸಿದ್ದ ಘಟನೆ ಬಗ್ಗೆ ಕೂಡಾ ವಿಸ್ತೃತವಾಗಿ ವಿಡಿಯೋದಲ್ಲಿ ವಿವರಿಸಿದ್ದಾನೆ.
ಈ ಘಟನೆ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಮೃತ ಯುವಕನ ವಿಡಿಯೋ ಹೇಳಿಕೆ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ತಯಾರಿ ನಡೆಸಿದ್ದಾರೆ.
ಸ್ಥಳೀಯರು, ಕುಟುಂಬಸ್ಥರು ಹಾಗೂ ಪಕ್ಷದ ಕೆಲವರು ಈ ವಿಷಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.