
ಶಿವಮೊಗ್ಗ: ಜಮೀನನ್ನು ಸಮತಟ್ಟು ಮಾಡಲು ಅನುಮತಿ ನೀಡುವದಕ್ಕಾಗಿ ರೈತರಿಂದ ಲಂಚ ಸ್ವೀಕರಿಸುತ್ತಿದ್ದ ತಾಳಗುಪ್ಪದ ಆರ್‌ಐ ಮಂಜುನಾಥ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಅವರು 3,000 ರೂ. ಲಂಚದ ಹಣ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲೇ ಇಂದು ಮಧ್ಯಾಹ್ನ ಕಾರ್ಯಾಚರಣೆ ನಡೆಯಿತು.
ಶಿವಮೊಗ್ಗ ಜಿಲ್ಲಾ ಲೋಕಾಯುಕ್ತದ ಪತ್ರಿಕಾ ಪ್ರಕಟಣೆಯ ಪ್ರಕಾರ, ಶಿರೂರು ಹೋಬಳಿಯ ಮುಂಡಿಗೆಹಳ್ಳಿ ನಿವಾಸಿ ಎಚ್.ಎಸ್. ಕೃಷ್ಣಮೂರ್ತಿ ಎಂಬ ರೈತ ಈ ಕುರಿತು ದೂರು ನೀಡಿದ್ದರು. ಅವರು ಶಿರೂರು ಗ್ರಾಮದ ಸರ್ವೆ ನಂ.125ರಲ್ಲಿ ತಗ್ಗು-ಉಬ್ಬು ಇರುವ ಸುಮಾರು ಎರಡು ಎಕರೆ ಜಮೀನನ್ನು ಸಮತಟ್ಟು ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಆರ್‌ಐ ಮಂಜುನಾಥ್, ಜಮೀನಿನ ಕೆಲಸ ನಿಲ್ಲಿಸಲು ಒತ್ತಾಯಿಸಿದ್ದು, ಮುಂದಿನ ಅನುಮತಿಗಾಗಿ ಲಂಚವನ್ನು ಕೇಳಿದ್ದಾಗಿ ರೈತ ತಿಳಿಸಿದ್ದಾರೆ.
ದೂರುದಾರ ಕೃಷ್ಣಮೂರ್ತಿಯ ಪ್ರಕಾರ, ಮಂಜುನಾಥ್ ಮೊದಲು ಮಾರ್ಚ್ 20ರಂದು ಫೋನ್‌ಪೇ ಮೂಲಕ 2,500 ರೂ. ಮತ್ತು ಏಪ್ರಿಲ್ 2ರಂದು 500 ರೂ. ಪಡೆದುಕೊಂಡಿದ್ದು, ಮತ್ತೆ 3,000 ರೂ. ನೀಡುವಂತೆ ಒತ್ತಾಯಿಸಿದ್ದರು. ಇದನ್ನು ಆಧಾರ ಮಾಡಿಕೊಂಡು ಲೋಕಾಯುಕ್ತ ಪೊಲೀಸ್ ತಂಡ, ಇಂದು ಮಧ್ಯಾಹ್ನ 3.05ರ ಸುಮಾರಿಗೆ ಸಾಗರ ತಾಲ್ಲೂಕಿನ ಶಿರೂರು ಆಲಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 206ರ ಬಳಿ ದಾಳಿ ನಡೆಸಿ, ರೈತನಿಂದ ಹಣ ಸ್ವೀಕರಿಸುತ್ತಿದ್ದ ಆರ್‌ಐ ಮಂಜುನಾಥ್ ಅವರನ್ನು ಬಲೆ ಹಾಕಿದರು.
ಈ ಸಂಬಂಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ತಿದ್ದುಪಡಿ ಕಾಯ್ದೆ 2018ರ ಸೆಕ್ಷನ್ 7(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವೀರಬಸಪ್ಪ ಎಲ್. ಕುಸಲಾಪುರ ನೇತೃತ್ವದಲ್ಲಿ ಮುಂದಿನ ತನಿಖೆ ನಡೆಯುತ್ತಿದೆ.