
ಬೆಂಗಳೂರು ನಗರದ ಪುಲಕೇಶಿನಗರದಲ್ಲಿ ಪೊಲೀಸರ ವೇಷದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ನಿತುಲ್ ರಾಜ್ ಎಂಬ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ವಾರ ಸಂಭವಿಸಿದ ಈ ಘಟನೆ ವೇಳೆ, ಸಂತೋಷ್ ಎಂಬುವವರು ತಮ್ಮ ಕಾರಿನಲ್ಲಿ ಸಾಗುತ್ತಿದ್ದಾಗ, ನಿತುಲ್ ರಾಜ್ ಅವರ ಕಾರಿಗೆ ಅಲ್ಪ ಮಟ್ಟಿನ ಡಿಕ್ಕಿ ಸಂಭವಿಸಿದೆ. ಈ ಸಂದರ್ಭದಲ್ಲಿ ಸಂತೋಷ್ ಅವರು ಕಾರು ನಿಲ್ಲಿಸದೇ ಸಾಗಿದ ಪರಿಣಾಮ, ಕೋಪಗೊಂಡ ನಿತುಲ್ ತನ್ನ ವಾಹನದಲ್ಲಿ ಅಕ್ರಮವಾಗಿ ಸೈರನ್ ಆನಿಸಿಕೊಂಡು ಅವರನ್ನು ಹಿಂಬಾಲಿಸಿದ್ದಾರೆ.
ಅವನು ಕಾರು ನಿಲ್ಲಿಸಿ ತಾನು ಪೊಲೀಸ್ ಅಧಿಕಾರಿ ಎಂದು ಸುಳ್ಳು ಹೇಳಿ, ಸಂತೋಷ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ನಂತರ ನಿತುಲ್ ಅಲ್ಲಿಂದ ಪರಾರಿಯಾಗಿದ್ದ.
ಈ ಘಟನೆ ಬಗ್ಗೆ ಸಂತೋಷ್ ಅವರು ಪುಲಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ ಮೇಲೆ, ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ನಿತುಲ್ ರಾಜ್ ನ ತಕ್ಷಣ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ವೇಷವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.