
ಹುಬ್ಬಳ್ಳಿಯಲ್ಲಿ ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ನೀಡಬೇಕಾದ ಪೌಷ್ಟಿಕ ಆಹಾರಗಳ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಬಾ ಠಾಣೆ ಪೊಲೀಸರು ಮತ್ತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರು ಸೋನಿಯಾಗಾಂಧಿ ನಗರದ ಅಲ್ತಾಫ್ ಕಲಾದಗಿ, ಕೇಶ್ವಾಪುರದ ಸಲೀಂ ಬೇಪಾರಿ, ಉದಯನಗರದ ಸಲೀಂ ಶೇಖ, ಮೆಹಬೂಬನಗರದ ಸಲೀಂ ಅತ್ತಾರ, ಬಂಕಾಪುರ ಚೌಕದ ದಾಪೀರ್ ಚೌಧರಿ ಹಾಗೂ ಬಸವರಾಜ ವಾಲ್ಮೀಕಿ ಎಂದು ಗುರುತಿಸಲಾಗಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಬೈತುಲ ಕಿಲ್ಲೆದಾರ ಅವರು ತಲೆಮರೆಸಿಕೊಳ್ಳಲು ಈ ಆರೋಪಿಗಳು ಸಹಾಯ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಬೈತುಲ ಕಿಲ್ಲೆದಾರ ಮತ್ತು ಫಾರುಕ್ ಶೇಖ್ ದೊಡ್ಡಮನಿ ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಎರಡು ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ. ಸಿಸಿಬಿ ಹಾಗೂ ಕಸಬಾ ಠಾಣೆ ಪೊಲೀಸರು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ತೆರಳಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಪೌಷ್ಟಿಕ ಆಹಾರ ಕಳವು ಮತ್ತು ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದುವರೆದ ತನಿಖೆಯಿಂದ ಮತ್ತಷ್ಟು ಮಾಹಿತಿಗಳು ಲಭ್ಯವಾಗುವ ನಿರೀಕ್ಷೆಯಿದೆ.