ರೌಡಿ ಎಡಿಟ್ಸ್ ಎಂದು ಹೇಳಿ ರೌಡಿಗಳನ್ನು ಹೀರೋ ಮಾಡುವ ರೀತಿಯಲ್ಲಿ ರೀಲ್ಸ್‌ಗಳು ಪ್ರತಿ ದಿನವೂ ಬಿಡುಗಡೆಯಾಗುತ್ತಿತ್ತು. ಪೊಲೀಸರಿಗೂ ಸಿಗದ ಈ ರೌಡಿಗಳ ಪೋಟೊಗಳು, ವಿಡಿಯೊ ರೀಲ್ಸ್ ಮಾಡುವವರಿಗೆ ಸಿಗುತ್ತಿತ್ತು. ಇದರಿಂದ ಸಹಜವಾಗಿಯೇ ಪೊಲೀಸರಿಗೂ ಅನುಮಾನ ಬಂದಿತ್ತು. ರೌಡಿಗಳಾದ ಸೈಲೆಂಟ್ ಸುನೀಲ, ವಿಲ್ಸನ್ ಗಾರ್ಡನ್ ನಾಗ, ಕಾಡುಬೀಸನಹಳ್ಳಿ ರೋಹಿತ್, ಕುಣಿಗಲ್ ಗಿರಿ ಇಂತಹ ನಟೋರಿಯಸ್ ರೌಡಿಗಳ ರೀಲ್ಸ್‌ಗಳೇ ಹೆಚ್ಚಾಗಿವೆ. ಅಷ್ಟಲ್ಲದೆ ಆಯಾ ಏರಿಯಾದ ಪುಡಿ ರೌಡಿಗಳೂ ಕೂಡ ತಮ್ಮ ಹವಾ ಮೇಂಟೇನ್ ಮಾಡುವ ಸಲುವಾಗಿ ರೀಲ್ಸ್ ಮೊರೆ ಹೋಗುತ್ತಿದ್ದರು.
ಕೆಲ ರೌಡಿಗಳ ಶಿಷ್ಯಂದಿರು ಬಾಸ್ ಎಂದು ರೀಲ್ಸ್ ಮಾಡಿದರೆ, ಉಳಿದವರು ಕೆಲಸವಿಲ್ಲದ ಕೆಲ ಹುಡುಗರಿಗೆ 500 ರೂ. ಕೊಟ್ಟು ರೀಲ್ಸ್ ಮಾಡಿ ಅಪ್ಲೋಡ್ ಮಾಡುವ ಕೆಲಸಗಳನ್ನು ನೀಡುತ್ತಿದ್ದರು. ಇನ್ನು ಏರಿಯಾದಲ್ಲಿ ತಮ್ಮ ಅಸ್ತಿತ್ವದ ಬಗ್ಗೆ ಇರುವಿಕೆಯನ್ನು ತೋರಿಸಿಕೊಳ್ಳಲು ಹಾಗೂ ಫ್ಯಾನ್ ಫಾಲೋವರ್ಸ್‌ಗಳನ್ನು ಹೆಚ್ಚಿಸಲು ಈ ರೀತಿಯ ಕೆಲಸಗಳನ್ನು ರೌಡಿಗಳ ಶಿಷ್ಯಂದಿರು ಮಾಡುತ್ತಿದ್ದರು. ಎಲ್ಲೋ ಕೂತ ಮುಖ್ಯ ರೌಡಿಯೇ ಈ ರೀತಿಯ ಕೃತ್ಯವನ್ನು ಎಸಗಲು ಪ್ರೇರೆಪಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ಬ್ಯಾನರ್‌ಗಳನ್ನು ಕಟ್ಟಿ ಏರಿಯಾದಲ್ಲಿ ಹವಾ ತೋರಿಸುತ್ತಿದ್ದರು. ಸದ್ಯ ಸೋಷಿಯಲ್ ಮೀಡಿಯಾ ಮೂಲಕ ತಮ್ಮದೇ ಆದ ಕುಖ್ಯಾತಿಯನ್ನು ಗಳಿಸುತ್ತಿದ್ದಾರೆ. ಈ ಸಂಬಂಧ ಅಪ್ರಾಪ್ತರ ಮನೆಯವರನ್ನು ಕರೆಸಿ ವಾರ್ನಿಂಗ್ ಮಾಡಲಾಗಿದೆ. ಸುಮಾರು 60ಕ್ಕೂ ಹೆಚ್ಚು ರೌಡಿಗಳ ಪೇಜ್ ಅಕೌಂಟ್‌ಗಳನ್ನು ಬಂದ್ ಮಾಡಲಾಗಿದೆ. ಸಿಸಿಬಿಯ ಆರ್ಗನೈಝ್ ಕ್ರೈಂ ವಿಂಗ್‌ನ ಕಾರ್ಯಾಚರಣೆ ಇದು.