ಸರಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಹಲವರು ಹಲವು ವರ್ಷಗಳ ಕಾಲ ಓದಿ ಹರಸಾಹಸಪಟ್ಟು ತಮ್ಮ ಜೀವನದ ಕನಸುಗಳನ್ನೆಲ್ಲ ಬದಿಗಿಟ್ಟು ಸರಕಾರಿ ಕೆಲಸ ಗಿಟ್ಟಿಸಿಕೊಳ್ಳುವುದೇ ತಮ್ಮ ಧ್ಯೇಯವನ್ನಾಗಿ ಮಾಡಿಕೊಂಡು ಶ್ರಮಿಸುತ್ತಾರೆ ಹಾಗೂ ಈಗಲೂ ಸಹ ಶ್ರಮಿಸುತ್ತಿದ್ದಾರೆ. ಸರಕಾರಿ ಕೆಲಸಗಳಲ್ಲಿ ಅನುಕೂಲಗಳು ಹೆಚ್ಚು ಹಾಗೂ ಸಮಾಜದಲ್ಲಿ ಒಂದು ಒಳ್ಳೆಯ ಮರ್ಯಾದೆಯೂ ಸಿಗುತ್ತದೆ ಎಂಬ ಕಾರಣಕ್ಕಾಗಿ ಸರ್ಕಾರಿ ಕೆಲಸಕ್ಕೆ ಯಾವಾಗಲೂ ಸ್ಪರ್ಧೆ ಹೆಚ್ಚಾಗಿಯೇ ಇರುತ್ತದೆ. ಆದರೆ ಹಲವರು ಇಂತಹ ಸ್ಪರ್ಧೆಗಳಲ್ಲಿ ಗೆದ್ದು ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವಾಗದೆ ಅಡ್ಡದಾರಿ ಹಿಡಿದು ಕೆಲಸ ಗಿಟ್ಟಿಸಿಕೊಂಡು ಹಗರಣಗಳನ್ನು ಮಾಡಲು ಮುಂದಾಗುತ್ತಾರೆ. ಇಂತಹದೇ ಘಟನೆಯೊಂದು ರಾಮನಗರದ ನಗರಸಭೆಯಲ್ಲಿ ನಡೆದಿದೆ.

ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಶಿಫಾರಸು ಮಾಡಿದ ಚನ್ನಪಟ್ಟಣ ಪೌರಾಯುಕ್ತರು.

ಪೌರಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಂತಹ ನಾರಾಯಣರವರು ೪-೫-೨೦೧೨ ರಂದು ಸೇವೆಯಲ್ಲಿರುವಾಗಲೇ ಮೃತಪಡುತ್ತಾರೆ. ಆದಕಾರಣ ಚನ್ನಪಟ್ಟಣ ನಗರಸಭೆಯ ಪೌರಾಯುಕ್ತರು ಅನುಕಂಪದ ಆಧಾರದ ಮೇಲೆ ನಾರಾಯಣರವರ ಮಗನಾದ ರವಿಕಾಂತ್‌ನನ್ನು ನೇಮಕ ಮಾಡಿಕೊಳ್ಳುವಂತೆ ದಿನಾಂಕ ೨೪-೧೧-೨೦೧೨ ರಂದು ಚನ್ನಪಟ್ಟಣ ಪೌರಾಯುಕ್ತರು ರಾಮನಗರ ಜಿಲ್ಲಾಧಿಕಾರಿಗಳ ಬಳಿ ಶಿಫಾರಸು ಮಾಡಿರುತ್ತಾರೆ.

ಆದೇಶದ ಪತ್ರದಲ್ಲಿ ಏನಿತ್ತು?

ಚನ್ನಪಟ್ಟಣ ಪೌರಾಯುಕ್ತರ ಶಿಫಾರಸ್ಸಿನ ಮೇಲೆ ರಾಮನಗರ ಜಿಲ್ಲಾಧಿಕಾರಿಗಳು ಉಲ್ಲೇಖ (೧)ರ ಸಾಮಾನ್ಯ ನಿಯಮಗಳನ್ನು ಸಡಿಲಿಸಿ ಶ್ರೀ ರವಿಕಾಂತ್ ಬಿನ್ ಲೇಟ್ ನಾರಾಯಣರವರನ್ನು ರಾಮನಗರ ನಗರಸಭೆಯ ಹಾಲಿ ಖಾಲಿ ಇರುವ ‘ಡಿ’ ದರ್ಜಿ (ಗಾರ್ಡನರ್) ಹುದ್ದೆಗೆ ಸಂಖ್ಯೆ: ಯುಡಿಡಿ/೫೨/ಬಿಎಂಸ್/೨೦೦೯, ದಿನಾಂಕ ೨೧-೦೧-೨೦೧೧ರ ಪ್ರಕಾರ ಶೆಡ್ಯೂಲ್ ೧ ಕ್ರಮ ಸಂಖ್ಯೆ ೩೯ರ ಪ್ರಕಾರ ಸರ್ಕಾರದ ಆದೇಶ ಸಂಖ್ಯೆ: ನಅಇ/೧೫೨/ಎಂಎಲ್‌ಆರ್/೨೦೧೨, ದಿನಾಂಕ ೨೬/೦೬/೨೦೧೨ ರಂತೆ ಪರಿಷ್ಕೃತ ವೇತನ ಶ್ರೇಣಿ ೯೬೦೦-೧೪೫೫೦ ರಲ್ಲಿ ನಿಬಂಧನೆಗೊಳಪಟ್ಟು ನೇಮಿಸಿಕೊಂಡಿರುತ್ತಾರೆ. ನಿಬಂಧನೆಗಳು ಯಾವುವೆಂದರೆ ಸೇವೆಗೆ ಹಾಜರಾಗುವ ಪೂರ್ವದಲ್ಲಿ ಸರ್ಕಾರಿ ವೈದ್ಯಾಧಿಕಾರಿ ಅವರಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಹಾಜರಾಗುವ ಸಮಯದಲ್ಲಿ ಜನ್ಮದಿನಾಂಕ, ಶೈಕ್ಷಣಿಕ ಅರ್ಹತೆಯ ಮುಂತಾದವುಗಳನ್ನು ನೀಡಬೇಕು ಹಾಗೂ ಇದನ್ನು ಅಧಿಕಾರಿಗಳು ಪರಿಶೀಲಿಸಿ ನೇಮಕ ಮಾಡಿಕೊಳ್ಳಬೇಕು. ಈ ರೀತಿ ನೀಡಿರುವ ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆ ತಪ್ಪಾಗಿದ್ದರೆ ಕೆಲಸದಿಂದ ವಜಾ ಮಾಡಲಾಗುವುದು ಎಂಬುದಾಗಿಯೂ ಸಹ ಆದೇಶ ಪತ್ರದಲ್ಲಿ ಬರೆದಿರುತ್ತಾರೆ. ಅಲ್ಲದೆ ಸೇವೆಗೆ ಹಾಜರಾಗುವ ಸಂದರ್ಭದಲ್ಲಿ ಸ್ವಾಮಿನಿಷ್ಠೆ ಬಗ್ಗೆ ಪ್ರಮಾಣ ಸ್ವೀಕರಿಸುವುದು ಹಾಗೂ ಕುಟುಂಬದ ಆಸ್ತಿ ಹಾಗೂ ಸಾಲಗಳ ಬಗ್ಗೆ ಸಂಪೂರ್ಣ ದಾಖಲೆಗಳನ್ನು ಹಾಜರುಪಡಿಸಬೇಕೆಂದು ಉಲ್ಲೇಖಿಸಿರುತ್ತಾರೆ.

ಸರಕಾರಿ ಕೆಲಸ ಗಿಟ್ಟಿಸಿಕೊಳ್ಳಲು ವಿವಿಧ ರೀತಿಯ ಕಳ್ಳಾಟಗಳನ್ನಾಡಿದ ರವಿಕಾಂತ್!

ಪೌರಕಾರ್ಮಿಕರಾದಂತಹ ನಾರಾಯಣರವರು ಮೃತಪಟ್ಟ ೨೦ ದಿನಕ್ಕೆ ಯಾವುದೇ ದಾಖಲೆಗಳನ್ನು ನೀಡದೆ ನೇರವಾಗಿ ಅನುಕಂಪದ ಆಧಾರಿತ ನೌಕರಿಗೆ ಅರ್ಜಿ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಯಾವುದಾದರೂ ದಾಖಲೆಗಳನ್ನು ಪಡೆಯಬೇಕಾದರೆ ಹಲವು ರೀತಿ ಪರೀಕ್ಷಿಸುತ್ತಾರೆ, ಹಲವು ರೀತಿಯಲ್ಲಿ ಪ್ರಶ್ನಿಸುತ್ತಾರೆ ಹಾಗೂ ಹಲವು ದಿನಗಳ

ಕಾಲ ಸತಾಯಿಸುತ್ತಾರೆ. ಆದರೆ ರವಿಕಾಂತನು ಮರಣ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಡತೆ ಪ್ರಮಾಣ ಪತ್ರ, ವಂಶರುಕ್ಷ, ಅಫಿಡೆವಿಟ್ ಮತ್ತು ಮಹಜರು ವರದಿ ಯಾವುದನ್ನು ಸಹ ನೀಡದೆ ಅನುಕಂಪದ ಆಧಾರಿತ ನೌಕರಿಗೆ ಅರ್ಜಿ ಸಲ್ಲಿಸಿದ್ದಾನೆ. ಅಸಲಿ ವಿಚಾರವೇನೆಂದರೆ ಸ್ಥಳೀಯರು ಹೇಳುವ ಪ್ರಕಾರ ಈತನು ನಾರಾಯಣರವರ ಮಗನೇ ಅಲ್ಲ. ಮೊದಲು ಅರ್ಜಿ ಸಲ್ಲಿಸಿ ಅರ್ಜಿ ಒಪ್ಪಿಕೊಂಡ ನಂತರ ಬೇಕಿರುವ ದಾಖಲೆಗಳನ್ನು ಸೃಷ್ಟಿಸಿ ಕೊಳ್ಳೋಣ ಎಂದು ಆಲೋಚಿಸಿ ರವಿಕಾಂತನು ಅನುಕಂಪದ ಆಧಾರಿತ ಅರ್ಜಿ ಸಲ್ಲಿಸಿರುವ ಹಾಗಿದ. ಯಾವ ಅಧಿಕಾರಿಗಳ ಸಹಾಯವಿಲ್ಲದೆ ಇವನೊಬ್ಬನೇ ಇಷ್ಟೆಲ್ಲ ಮಾಡಿದ್ದಾನೆ ಎಂದರೆ ನಂಬಲು ಸಾಧ್ಯವಿಲ್ಲ. ಅಧಿಕಾರಿಗಳು ಹಾಗೂ ರವಿಕಾಂತನ್ನು ಮೊದಲೇ ಉಪಾಯ ಮಾಡಿ ಇಂತಹ ನೀಚ ಕೆಲಸಕ್ಕೆ ಕೈ ಹಾಕಿದ್ದಾರೆ. ಅರ್ಜಿ ಒಪ್ಪಿದ ನಂತರ ದಾಖಲೆಗಳನ್ನು ಸೃಷ್ಟಿಸಿರುವುದಕ್ಕೆ ಪುಷ್ಟಿ ಕೊಡುವಂತಹ ಮಾಹಿತಿ ಹೊಂದಿದೆ ಅದೇನೆಂದರೆ ಅರ್ಜಿ ಸಲ್ಲಿಸಿದ ನಂತರವೇ ರವಿಕಾಂತ ಮತ್ತು ನಾರಾಯಣರವರು ಇಬ್ಬರು ಮಾತ್ರ ಇರುವಂತಹ ರೇಷನ್ ಕಾರ್ಡ್ ಮಾಡಿಸಿರುತ್ತಾನೆ ಹಾಗೂ ಇದೇ ನಕಲಿ ದಾಖಲೆಯನ್ನು ಹುದ್ದೆಗೆ ನೇಮಕವಾಗುವ ಸಂದರ್ಭದಲ್ಲೂ ಸಹ ನೀಡಿರುತ್ತಾನೆ. ಹಾಗಾದರೆ ನಾರಾಯಣರವರ ಕುಟುಂಬದಲ್ಲಿ ಬೇರೆ ಯಾರು ಇರಲಿಲ್ಲವೇ? ನಾರಾಯಣರವರು ಮದುವೆಯಾಗದೆ ರವಿಕಾಂತನನ್ನು ಹಡೆದರ. ಇದು ನಿಜಕ್ಕೂ ಸಾಧ್ಯಾನಾ? ಎಲ್ಲಾ ಸುಳ್ಳು. ರವಿಕಾಂತನು ಸರ್ಕಾರಿ ಕೆಲಸಕ್ಕೆ ಸೇರಿ ಕೊಳ್ಳಬೇಕೆಂಬ ಉದ್ದೇಶದಿಂದ ತಿಳಿಯದೇ ಇರುವ ಯಾರೋ ಒಬ್ಬ ವ್ಯಕ್ತಿಯನ್ನು ತನ್ನ ತಂದೆ ಎಂದು ಹೇಳಿಕೊಂಡು ಸರಕಾರಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಸರ್ಕಾರಿ ಕೆಲಸಕ್ಕಾಗಿ ತಂದೆಯನ್ನೇ ಬದಲಿಸಿದ ಇಂತಹ ನೀಚನು ನಡತೆಗೆಟ್ಟವನು ಎಂದರೆ ತಪ್ಪಾಗಲಾರದು. ಇಂಥವನು ಕೆಲಸದಲ್ಲಿ ನಿಷ್ಠೆಯಾಗಿರುವನೇ?

ವರ್ಗಾವಣೆ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಯನ್ನು ಸಹ ನಕಲು ಮಾಡಿರುವ ರವಿಕಾಂತ.

ಜಿಲ್ಲಾಧಿಕಾರಿಗಳು ಆದೇಶದಂತೆ ರವಿಕಾಂತ ನೇಮಕವಾಗುವ ಪೂರ್ವದಲ್ಲಿ ವರ್ಗಾವಣೆ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಯನ್ನು ನೀಡಬೇಕಾಗಿರುತ್ತದೆ. ಆದಕಾರಣ ರವಿಕಾಂತನು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿರುವ ಜವಹರಲಾಲ್ ನೆಹರು ಪ್ರೌಢಶಾಲೆಯಲ್ಲಿ ಓದಿರುವುದಾಗಿ ಹಾಗೂ ಆ ಶಾಲೆಯಲ್ಲಿ ೯ನೇ ತರಗತಿ ಮುಗಿಸಿದ್ದು ಅದರ ಅಂಕಪಟ್ಟಿ ಹಾಗೂ ವರ್ಗಾವಣೆ ಪ್ರಮಾಣ ಪತ್ರವನ್ನು ಪಡೆದು ನೇಮಕವಾಗುವ ಪೂರ್ವದಲ್ಲಿ ನೀಡಿರುತ್ತಾನೆ. ಈ ವರ್ಗಾವಣೆ ಪ್ರಮಾಣ ಪತ್ರವನ್ನು ಚನ್ನಪಟ್ಟಣ ನಗರಸಭೆಯ ಪೌರಾಯುಕ್ತರು ದೃಢೀಕರಿಸಿರುತ್ತಾರೆ. ರವಿಕಾಂತ ನೀಡಿರುವ ವರ್ಗಾವಣೆಯ ಪತ್ರದಲ್ಲಿ ರವಿಕಾಂತನು ಉತ್ತೀರ್ಣನಾಗಿದಾನ ಮುಂದಿನ ತರಗತಿಗೆ ಹೋಗಬಹುದು ಎಂಬ ಕಾಲಂನಲ್ಲಿ ಹೌದು ಅಥವಾ ಇಲ್ಲ ಯಾವುದನ್ನು ಸಹ ನಮೂದಿಸಿರುವುದಿಲ್ಲ. ಇವನು ಉತ್ತೀರ್ಣನಾಗದಿದ್ದಲ್ಲಿ ಇವನಿಗೆ ನೀಡಿರುವ ಅಂಕಪಟ್ಟಿ ಸುಳ್ಳೇ? ಅಂಕಪಟ್ಟಿಯನ್ನು ವರ್ಗಾವಣೆ ಪ್ರಮಾಣ ಪತ್ರದ ಹಿಂದೆ ಲಿಖಿತ ರೂಪದಲ್ಲಿ ಬರೆದಿರುವ ಕಾರಣ ಈ ಅನುಮಾನಗಳು ಮೂಡಿವೆ. ಇದಿಷ್ಟು ವರ್ಗಾವಣೆ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಯಲ್ಲಿ ಕಾಣುತ್ತಿರುವ ತಪ್ಪುಗಳು ಆದರೆ ಇದೆಲ್ಲಕ್ಕಿಂತ ಮುಖ್ಯವಾದ ವಿಚಾರವೇನೆಂದರೆ, ರವಿಕಾಂತ್‌ನು ಓದಿದಂತಹ ಜವಾಹರ್ಲಾಲ್ ನೆಹರು ಪ್ರೌಢಶಾಲೆ ಮಳವಳ್ಳಿಯಲ್ಲಿ ಇಲ್ಲವೇ ಇಲ್ಲ. ಇಲ್ಲದ ಶಾಲೆಯಿಂದ ವರ್ಗಾವಣೆ ಪ್ರಮಾಣ ಪತ್ರ ರವಿಕಾಂತಾನ್ನು ಹೇಗೆ ತಂದ? ಮಳವಳ್ಳಿ ಕ್ಷೇತ್ರಶಿಕ್ಷಣಾಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಜವಾಹರಲಾಲ್ ನೆಹರೂ ಪ್ರೌಢಶಾಲೆ ಎಂಬ ಹೆಸರಿನ ಶಾಲೆಯು ಮಳವಳ್ಳಿ ತಾಲೂಕಿನಲ್ಲಿ ಅಸ್ತಿತ್ವದಲ್ಲೇ ಇರುವುದಿಲ್ಲ. ಹಾಗೂ ವರ್ಗಾವಣೆ ಪ್ರಮಾಣ ಪತ್ರವು ಸಹ ನಕಲಿ ಎಂದು ಕ್ಷೇತ್ರಶಿಕ್ಷಣ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಕಲಿ ವರ್ಗಾವಣೆ ಪ್ರಮಾಣ ಪತ್ರವನ್ನು ದೃಢೀಕರಿಸಿರುವಂತಹ ಚನ್ನಪಟ್ಟಣ ನಗರಸಭೆ ಪೌರಾಯುಕ್ತರ ಬುದ್ಧಿವಂತಿಕೆಯನ್ನು ಮೆಚ್ಚಲೇಬೇಕು.

ಇಲ್ಲದ ಶಾಲೆಯಲ್ಲಿ ಓದಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಎನ್ನು ಪಾಸಾದ ರವಿಕಾಂತ!

೯ನೇ ತರಗತಿ ಓದಿರುವ ಹಾಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಅದೇ ದಾಖಲೆಗಳ ಆಧಾರದ ಮೇಲೆ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣನಾಗಿ ನಂತರ ಪಿಯುಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣನಾಗಿ ತದನಂತರ ಇಲಾಖೆಯ ಪರೀಕ್ಷೆಗಳನ್ನು ಸಹ ಬರೆದು ಉತ್ತೀರ್ಣನಾಗಿದ್ದಾನೆ. ಇಂತಹ ಸಂದರ್ಭದಲ್ಲಿ ೯ನೇ ತರಗತಿ ಓದಿರುವ ಹಾಗೆ ಸುಳ್ಳು ದಾಖಲೆ ಸೃಷ್ಟಿಸಿದವನು ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯ ಅಂಕಪಟ್ಟಿ ದಾಖಲೆಗಳನ್ನು ಸಹ ನಕಲು ಮಾಡಬಹುದಲ್ಲವೇ ಎಂಬ ಅನುಮಾನ ಮೂಡಬಹುದು? ಆದರೆ ಇದಕ್ಕೆ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷಾ ಮಂಡಳಿಗಳು ಸ್ಪಷ್ಟನೆ ನೀಡಬೇಕು.

ರವಿಕಾಂತನಿಗೆ ಹಾಗೂ ಆತನಿಗೆ ಬೆಂಬಲಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಕ್ಕ ಶಿಕ್ಷೆ ನೀಡಬೇಕು.

ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ರವಿಕಾಂತನು ಎಷ್ಟೇಲ್ಲ ಹರಸಾಹಸ ಪಟ್ಟಿದ್ದಾನೆ ನೋಡಿ ಒಂದು ಕಡೆ ತಂದೆಯನ್ನು ಬದಲಿಸಿದ್ದಾನೆ ಇನ್ನೊಂದು ಕಡೆ ಇಲ್ಲದ ಶಾಲೆಯನ್ನು ಹುಟ್ಟಿಸಿದ್ದಾನೆ. ಸರ್ಕಾರಿ ಅಧಿಕಾರಿಗಳಿಗೆ ಹಾಗೂ ವ್ಯವಸ್ಥೆಯ ಕಣ್ಣಿಗೆ ಮಣ್ಣೆರಚಿದ್ದಾನೆ. ಇಷ್ಟಕ್ಕೆಲ್ಲಾ ಕಾರಣ ಚನ್ನಪಟ್ಟಣ ನಗರಸಭೆಯ ಪೌರಾಯುಕ್ತರು. ರವಿಕಾಂತನನ್ನು ಅನುಕಂಪದ ಆಧಾರದ ಮೇಲೆ ಕೆಲಸಕ್ಕೆ ನೇಮಕ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದು ಹಾಗೂ ನಕಲಿ ವರ್ಗಾವಣೆ ಪತ್ರವನ್ನು ದೃಢೀಕರಿಸಿರುವುದು ಚನ್ನಪಟ್ಟಣ ನಗರಸಭೆಯ ಪೌರಾಯುಕ್ತರು. ಕೈಯಲ್ಲಿ ಲೇಖನಿ ಇದೆ ಎಂದು ಪರಿಶೀಲಿಸದೆ ಸಿಕ್ಕಸಿಕ್ಕ ಕಾಗದದ ಮೇಲೆ ಸಹಿಮಾಡಿ ದೃಢೀಕರಿಸುತ್ತಿರುಂತಹ ಇಂತಹ ಪೌರಾಯುಕ್ತರ ವಿರುದ್ಧ ಜಿಲ್ಲಾಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು. ಸರ್ಕಾರಿ ಅಧಿಕಾರಿಗಳಿಗೆ ಹಾಗೂ ವ್ಯವಸ್ಥೆಯ ಕಣ್ಣಿಗೆ ಮಣ್ಣೆರಚಿ ಸರಕಾರಿ ಕೆಲಸ ಗಿಟ್ಟಿಸಿಕೊಂಡ ರವಿಕಾಂತನನ್ನು ಕೆಲಸದಿಂದ ವಜಾ ಮಾಡಬೇಕು ಹಾಗೂ ವಂಚನೆಯ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು.

error: Content is protected !!