ಮುಂಡಗೋಡ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ ಉತ್ತರ ಕನ್ನಡ,ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪದನಿಮಿತ್ತ ಕ್ಷೇತ್ರ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ, ಮುಂಡಗೋಡ. ಶಿರಸಿ ಶೈಕ್ಷಣಿಕ ಜಿಲ್ಲೆ
ಸಮೂಹ ಸಂಪನ್ಮೂಲ ಕೇಂದ್ರ ಚಿಗಳ್ಳಿ ಹಾಗೂ ಎಸ್ ಡಿ ಸಿ ಕೆ ಸರಕಾರಿ ಪ್ರೌಢ ಶಾಲೆ ಚಿಗಳ್ಳಿ ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚಿಗಳ್ಳಿ ತಾಲೂಕ: ಮುಂಡಗೋಡ, ಶಿರಸಿ ಶೈಕ್ಷಣಿಕ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಚಿಗಳ್ಳಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ/ಪ್ರೌಢ ಶಾಲೆಗಳ ಕಲಿಕಾ ಹಬ್ಬ ಇಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚಿಗಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಗ್ರಾಮದ ಶ್ರೀ ಗುರು ವೀರೇಶ್ವರ ಚೌಕಿ ಮಠ ಆವರಣದಿಂದ ಪೂರ್ಣ ಕುಂಭಮೇಳ, ಎತ್ತಿನ ಬಂಡಿ,ಹಾಗೂ ವಿವಿಧ ಸಾಂಸ್ಕೃತಿಕ ಜನಪದ ವೇಷಭೂಷಣಗಳೊಂದಿಗೆ ಅಲಂಕೃತಗೊಂಡ ಶಾಲಾ ವಿದ್ಯಾರ್ಥಿಗಳ ತಂಡಗಳನ್ನು ಚಿಗಳ್ಳಿ ಗ್ರಾಮ ಪಂಚಾಯತನ ಅಧ್ಯಕ್ಷರಾದ ಶ್ರೀಮತಿ ಭಾರತಿ ನಿಂಬಾಯಿ ಅವರು ಹಾಗೂ ಗ್ರಾಮ ಪಂಚಾಯತನ ಸರ್ವ ಸದಸ್ಯರು ಕಲಿಕಾ ಹಬ್ಬದ ವೃತ್ತಗಳನ್ನು ಬೀಸುವುದರೊಂದಿಗೆ ಚಾಲನೆ ನೀಡಿದರು.
ತದನಂತರ ಕಲಿಕಾ ಹಬ್ಬದ ಹಾಡುಗಳನ್ನು ಹಾಡುತ್ತಾ ಊರಿನ ಪ್ರಮುಖ ಬೀದಿಗಳಲ್ಲಿ ಜಾಥಾ ಮೂಲಕ ಸಂಚರಿಸಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚಿಗಳ್ಳಿಯ ಆವರಣಕ್ಕೆ ಬರಲಾಯಿತು. ಕಲಿಕಾ ಹಬ್ಬದ ಹಾಡುಗಳೊಂದಿಗೆ ವೇದಿಕೆ ಮೇಲಿರುವ ಗಣ್ಯರನ್ನು ವಿದ್ಯಾರ್ಥಿಗಳು ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ. ಸಿ ಅಧ್ಯಕ್ಷರಾದ ಶ್ರೀ ಪರಶುರಾಮ ಷ ತೆಗ್ಗಳ್ಳಿ ವಹಿಸಿಕೊಂಡಿದ್ದರು. ಚಿಗಳ್ಳಿ ಸಿ ಆರ್ ಪಿ ಶ್ರೀ ಪ್ರಶಾಂತ್ ಸಾವಳಗಿ ಪ್ರಸ್ತಾವಿಕವಾಗಿ ಮಾತನಾಡಿ, ಇಲಾಖೆ ಹಮ್ಮಿಕೊಂಡಿರುವ ಈ ಕಲಿಕಾ ಹಬ್ಬದ ಮಹತ್ವ, ಉದ್ದೇಶಗಳು ಹಾಗೂ ಪಾಲಕರ ಜವಾಬ್ದಾರಿಯ ಬಗ್ಗೆ ವಿವರಿಸಿದರು. ಚಿಗಳ್ಳಿ ಗ್ರಾಮ ಪಂಚಾಯತನ ಅಧ್ಯಕ್ಷರಾದ ಶ್ರೀಮತಿ ಭಾರತಿ ನಿಂಬಾಯಿರವರು ವಿಜ್ಞಾನ ವಿಸ್ಮಯ ಪ್ರಯೋಗದ ಮೂಲಕ ಕಾರ್ಯಕ್ರಮವನ್ನು ವಿನೂತನವಾಗಿ ಉದ್ಘಾಟಿಸಿ ಶುಭ ಹಾರೈಸಿದರು. ಗ್ರಾಮದ ಹಿರಿಯರಾದ ಶ್ರೀ ಎಂ ಪಿ ಕುಸೂರವರು ಅತಿಥಿಗಳಾಗಿ ಮಾತನಾಡಉತ್ತಾ ನಮ್ಮ ಸಂಸ್ಕ್ರತಿ, ಸಂಪ್ರದಾಯ, ಜಾನಪದ ಹಿರಿಮೆ, ಗ್ರಾಮೀಣ ಬದುಕಿನ ಸೊಗಡಿನ ಬಗ್ಗೆ ಮಕ್ಕಳಿಗೆ ಕಿವಿಮಾತು ಹೇಳಿದರು. ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಪರಶುರಾಮ ಟಿಕ್ಕೋಜಿಯವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಶಿಕ್ಷಣ ಸಂಯೋಜಕ ಪಾಂಡುರಂಗ ಟಿಕ್ಕೋಜಿ ಅವರು ಕಾರ್ಯಕ್ರಮ ಕುರಿತು ಮಾತನಾಡಿ ಶಿಕ್ಷಕರ ಪ್ರತಿಭೆ ಹಾಗೂ ಶ್ರಮದ ಸಾರ್ಥಕತೆಯನ್ನು ಮಕ್ಕಳು ಬಳಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಶಾಲಾ ವಿದ್ಯಾರ್ಥಿನಿ ಕುಮಾರಿ ಶ್ರೇಯಾ ಶ್ರೀ ಜಾದವ ಕಲಿಕಾ ಚೇತರಿಕೆ ವರ್ಷ ಹಾಗೂ ಕಲಿಕಾ ಹಬ್ಬದ ಬಗ್ಗೆ ತನ್ನ ಅನಿಸಿಕೆ ವ್ಯಕ್ತಪಡಿಸಿದಳು.
ನಂತರ ಶ್ರೀಮತಿ ದೇವಕಿ ಛಾಯಪ್ಪ ಕಲಾಲ ಸರಕಾರಿ ಪ್ರೌಢಶಾಲೆ ಚಿಗಳ್ಳಿ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿದ್ದನ ಕೊಪ್ಪ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನೆರವೇರಿತು. ಗ್ರಾಮ ಪಂಚಾಯತ ಸದಸ್ಯರುಗಳಾದ ಶ್ರೀ ಪ್ರಭುಲಿಂಗ ಕೆಂಣ್ಣನವರ, ಶ್ರೀ ಉದಯ ಕುಸೂರ ಶ್ರೀಮತಿ ರಹೀಮಾ ಮಕ್ತೇಸರ್ ರವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀ ಶಿವಾಜಿ ವಾಸಂಬಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ದಾಸಪ್ಪ, ಎ , ಪ್ರೌಢಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಪಕ್ಕೀರಸ್ವಾಮಿ ಹುಲಿಯವರ ಹಾಗೂ ಎರಡೂ ಶಾಲೆಗಳ ಎಸ್.ಡಿ.ಎಮ್.ಸಿ ಯ ಸರ್ವ ಸದಸ್ಯರು ಮತ್ತು ಶಿಕ್ಷಕ ವೃಂದ, ಸೊಸೈಟಿಯ ನಿರ್ದೇಶಕರುಗಳು, ಕ್ಲಸ್ಟರನ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಅಶೋಕ ಹಂಚಿನಮನೆ ಸ್ವಾಗತಿಸಿದರು, ಬಸವರಾಜ ಬೆಂಡ್ಲಗಟ್ಟಿ ನಿರೂಪಿಸಿದರು,ಕೆ ಕೆ ಕರುವಿನಕೊಪ್ಪ ವಂದಸಿದರು.
ನಂತರ ನಾಲ್ಕು ಕೊಠಡಿಗಳ ಆಡು-ಹಾಡು, ಕಾಗದ – ಕತ್ತರಿ, ಬಣ್ಣ, ಮಾಡು-ಆಡು, ಹಾಗೂ ಊರು ಸುತ್ತೋಣ ಎಂಬ ಹೆಸರಿನ ನಾಲ್ಕು ಕಲಿಕಾ ಮೂಲೆಗಳಲ್ಲಿ ಕಲಿಕಾ ಹಬ್ಬದ ಚಟುವಟಿಕೆಗಳು ಜರುಗಿದವು.
ವರದಿ:ಮಂಜುನಾಥ ಹರಿಜನ.