
ಬೆಂಗಳೂರು ಮಹಾನಗರ ಸಾರಿಗೆ (BMTC) ಬಸ್ಸಿನ ಮಹಿಳಾ ಕಂಡಕ್ಟರ್ ಚಾಣಕ್ಷತನದಿಂದ ನಾಲ್ವರು ಮಹಿಳೆಯರ ಕಳ್ಳರ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಈ ಘಟನೆ ಸೋಮವಾರ (ಮಾರ್ಚ್ 10) ಸಂಜೆ 7:15ರ ಸಮಯದಲ್ಲಿ ಮೆಜೆಸ್ಟಿಕ್‌ನಿಂದ ದೇವನಹಳ್ಳಿಯ ವಿಜಿಪುರಕ್ಕೆ ತೆರಳುತ್ತಿದ್ದ ಡಿಪೋ-50ಗೆ ಸೇರಿದ ಬಿಎಂಟಿಸಿ ಬಸ್‌ನಲ್ಲಿ ನಡೆದಿದೆ.
ಆಂಧ್ರಪ್ರದೇಶದಿಂದ ಬಂದ ಈ ನಾಲ್ವರು ಮಹಿಳೆಯರು ಬಸ್ಸಿಗೆ ಹತ್ತಿದ ಬಳಿಕ, ಪಕ್ಕದ ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ ಒಬ್ಬ ಮಹಿಳಾ ಕಳ್ಳಿಯು ಮೊಬೈಲ್ ಕದಿಯಲು ಯತ್ನಿಸಿದರು. ಇದನ್ನು ಗಮನಿಸಿದ ಮಹಿಳಾ ಕಂಡಕ್ಟರ್ ಕೂಡಲೇ ಬಸ್ ಚಾಲಕ ಮುನಿರತ್ನ ಅವರಿಗೆ ಮಾಹಿತಿ ನೀಡಿದರು.
ಚಾಣಾಕ್ಷ ನಿರ್ಧಾರ ಮತ್ತು ಬಂಧನ
ಮಹಿಳಾ ಕಂಡಕ್ಟರ್ ಸಲಹೆಂತೆ, ಚಾಲಕ ಬಸ್‌ನ ಡೋರ್ ಲಾಕ್ ಮಾಡಿದ್ದು, ಪೊಲೀಸರು ಬರುವವರೆಗೆ ಬಸ್‌ನ್ನು ನಿಲ್ಲಿಸಿದರು. ಇದರಿಂದ ಪತ್ತೆಯಾಗುವುದಕ್ಕೆ ಭಯಗೊಂಡ ಕಳ್ಳಿಯರು ಮಗು ಅಳುತ್ತಿದೆ ಎಂಬ ನೆಪದಲ್ಲಿ ಬಸ್ ಬಿಟ್ಟು ಪರಾರಿಯಾಗಲು ಯತ್ನಿಸಿದರು. ಆದರೆ, ಚಾಲಕ ಮಂಜುನಾಥ್ ಡೋರ್ ತೆರೆಯದೆ ಎಚ್ಚರಿಕೆ ವಹಿಸಿದರು.
ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ, ಪರಿಶೀಲನೆಯ ವೇಳೆ ಕಳ್ಳಿಯರು ಕದ್ದ ಮೊಬೈಲ್ ಮತ್ತು ಮಾಂಗಲ್ಯ ಸರವನ್ನು ಸೀಟಿನ ಕೆಳಗೆ ಬಿಸಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಅವರ ಬ್ಯಾಗ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನಾಭರಣ ಮತ್ತು ಹಲವಾರು ಮೊಬೈಲ್‌ಗಳು ಪತ್ತೆಯಾಗಿವೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.