
ಬೆಂಗಳೂರು: ಅತ್ತೆಯನ್ನು ಸಾಯಿಸಲು ಸೊಸೆಯೊಬ್ಬಳು ನೇರವಾಗಿ ವೈದ್ಯರ ಬಳಿ ಮಾತ್ರೆ ಕೇಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಶಾಕ್ ಮಾಡುವ ಘಟನೆ ನಗರವಾಸಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಏನಾಗಿದೆ ವಿಷಯ?
ಬೆಂಗಳೂರು ಮೂಲದ ಡಾಕ್ಟರ್ ಸುನೀಲ್ ಕುಮಾರ್ ಎಂಬವರ ಬಳಿ ಮಹಿಳೆಯೊಬ್ಬಳು, ತನ್ನ ಅತ್ತೆಯನ್ನು ಕೊಲ್ಲಲು ಸಹಾಯ ಕೇಳಿದ್ದಾಳೆ. “ನನ್ನ ಅತ್ತೆ ನನಗೆ ದಿನವೂ ಹಿಂಸೆ ನೀಡುತ್ತಾರೆ. ಅವರಿಗೆ ತುಂಬಾ ವಯಸ್ಸಾಗಿದೆ, ಅವರನ್ನು ಸಾಯಿಸಲು ಏನಾದರೂ ಮಾರ್ಗವಿದೆಯಾ?” ಎಂದು ವೈದ್ಯರಿಗೆ ಮೆಸೇಜ್ ಮಾಡಿದ್ದಾಳೆ.
ಅಷ್ಟೇ ಅಲ್ಲದೆ, “ಸಾಯಿಸಲು ಮಾತ್ರೆಗಳು ಇರಲ್ವಾ? ಒಂದೆರಡು ಮಾತ್ರೆ ತಗೊಂಡರೆ ಸಾಕಾ?” ಎಂದು ವಿಶೇಷವಾಗಿ ಕೇಳಿದ್ದಾಳೆ. ಈ ಸಂದೇಶಗಳು ವೈದ್ಯರನ್ನು ಅಚ್ಚರಿಗೊಳಿಸಿದ್ದು, ಅವರು ತಕ್ಷಣ ಈ ಬಗ್ಗೆ ಪ್ರಶ್ನೆ ಮಾಡಿದಾಗ, ಮಹಿಳೆ ತನ್ನ ಸಂದೇಶವನ್ನು ತಕ್ಷಣ ಡಿಲೀಟ್ ಮಾಡಿ, ವೈದ್ಯರ ನಂಬರ್ ಬ್ಲಾಕ್ ಮಾಡಿದ್ದಾಳೆ.
ಡಾಕ್ಟರ್ ಸೂಕ್ತ ಕ್ರಮ ತೆಗೆದುಕೊಂಡರು
ಮೆಸೇಜ್ ಡಿಲೀಟ್ ಮಾಡುತ್ತಿದ್ದರೂ, ಡಾಕ್ಟರ್ ಸುನೀಲ್ ಅವರು ಮುನ್ನೇಚ್ಚರಿಕೆ ವಹಿಸಿ ಸ್ಕ್ರೀನ್‌ಶಾಟ್ ತೆಗೆದು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಅವರ ಈ ಸೂಕ್ಷ್ಮತೆಯಿಂದ ಪ್ರಕರಣ ಗಂಭೀರತೆಯನ್ನು ಪಡೆದುಕೊಂಡಿದೆ.
ಪೊಲೀಸರು ತನಿಖೆ ಆರಂಭಿಸಿದ್ದಾರೆ
ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಆರೋಪಿಯಾದ ಸೊಸೆಯ ಮೊಬೈಲ್ ಈಗ ಸ್ವಿಚ್ ಆಫ್ ಆಗಿರುವುದಾಗಿ ತಿಳಿದುಬಂದಿದೆ. ಮಹಿಳೆಯ ಪತ್ತೆಯಾದ ಬಳಿಕವೇ ಈ ಘಟನೆಯ ನಿಜವಾದ ಹಿನ್ನೆಲೆ ಬಯಲಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದ್ದು, ಈ ಕೃತ್ಯ ಹೇಗೆ ಮತ್ತು ಏನಕ್ಕಾಗಿ ನಡೆಯುತ್ತಿತ್ತು ಎಂಬುದರ ಕುರಿತು ಸೂಕ್ಷ್ಮ ತನಿಖೆ ನಡೆಸಲಾಗುತ್ತಿದೆ.