೨೦೧೬-೧೭ ರಲ್ಲಿ ವಿಕಾಸ ದೆಸಿಸ್ಕಿಲ್ಸ್ ಎಂದು ಕಂಪನಿಯಂದು ಆರಂಭಗೊಂಡಿತ್ತು ಇದರ ಮುಖ್ಯಸ್ಥರುಗಳು ಕೌಶಿಕ್, ಕಾವ್ಯ ಹಾಗೂ ಗಿರೀಶ್ ಎಂಬುವವರು. ಈ ಕಂಪನಿಯ ಮುಖ್ಯ ಉದ್ದೇಶವೇನೆಂದರೆ ಪ್ರತಿಯೊಂದು ಗ್ರಾಮದಲ್ಲೂ ಈ ಕಂಪನಿಯ ಶಾಖೆಗಳನ್ನು ತೆರೆದು ಆನ್‌ಲೈನ್ ಸರ್ವಿಸ್‌ಗಳನ್ನು ಕೊಡುವುದು ಇವರ ಉದ್ದೇಶವೆಂದು ಹೇಳಿಕೊಂಡಿದ್ದರು. ಆನ್‌ಲೈನ್ ಸರ್ವಿಸ್ ಎಂದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಕ್ಯಾಸ್ಟ್ ಸರ್ಟಿಫಿಕೇಟ್, ಇನ್ಕಮ್ ಸರ್ಟಿಫಿಕೇಟ್ ಹಾಗೂ ಇನ್ನಿತರ ಉಪಯೋಗವಾದ ದಾಖಲೆಗಳನ್ನು ಮಾಡಿಕೊಡುವುದು. ಈ ಕಂಪನಿಯ ಫ್ರಾಂಚೈಸಿಯನ್ನು ಆಯಾ ಗ್ರಾಮಗಳಲ್ಲಿ ತೆರೆದರೆ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ ಹಾಗೂ ಸಮಯ ವ್ಯರ್ಥ ಮಾಡುವುದು ತಪ್ಪುತ್ತದೆ ಆದಷ್ಟು ಬೇಗ ಅವರಿಗೆ ಬೇಕಾದ ದಾಖಲೆಗಳನ್ನು ಹತ್ತಿರದಲ್ಲಿರುವ ಈ ಕಂಪನಿಯ ಕೇಂದ್ರದಲ್ಲಿ ಪಡೆಯಬಹುದು ಎಂಬ ಉದ್ದೇಶದಿಂದ ಕಂಪನಿಯನ್ನು ಆರಂಭ ಮಾಡಿದ್ದೇವೆಂದು ಹೇಳಿಕೊಂಡಿದ್ದರು. ಈ ಕಂಪನಿಯ ಶಾಖೆಗಳನ್ನು ತಮ್ಮ ಗ್ರಾಮದಲ್ಲಿ ತೆರೆಯಲು ಇಂದೇ ಸಂಪರ್ಕಿಸಿ ಎಂದು ಫೇಸ್ಬುಕ್ ಹಾಗೂ ಯೂಟ್ಯೂಬ್‌ಗಳಲ್ಲಿ ಜಾಹೀರಾತುಗಳನ್ನು ಹಾಕಿದ್ದರು ಜಾಹೀರಾತುಗಳನ್ನು ಹಾಗೂ ಇವರ ಮಾತುಗಳನ್ನು ನಂಬಿಕೊಂಡ ಹಲವರು ಇವರ ಕಂಪನಿಯ ಶಾಖೆಗಳನ್ನು ತಮ್ಮ-ತಮ್ಮ ಗ್ರಾಮದಲ್ಲಿ ತೆರೆಯಲು ಮುಂದಾದರು. ಈ ಕಂಪನಿಯ ಶಾಖೆಯನ್ನು ತೆರೆಯಲು ೩೦,೦೦೦ ರೂ ಮುಂಗಡ ಹಣವನ್ನು ಇವರಿಗೆ ಪಾವತಿಸಬೇಕಿತ್ತು ಪಾವತಿಸಿದ ನಂತರ ಅವರ ಕಂಪನಿಯ ವೆಬ್ಸೆöÊಟ್ನಲ್ಲಿ ಲಾಗಿನ್ ಮಾಡಲು ಅವಕಾಶ ನೀಡುತ್ತಿದ್ದರು. ಈ ರೀತಿ ಲಾಗಿನ್ ಆದ ಬಳಿಕ ತಮಗೆ ಬೇಕಾದ ಆನ್‌ಲೈನ್ ಸರ್ವಿಸ್‌ಗಳನ್ನು ಜನರಿಗೆ ಕೊಡಬಹುದು ಎಂದು ಹೇಳಿ ಹಣವನ್ನು ಪಡೆಯುತ್ತಿದ್ದರು ಹಣ ಪಡೆಯುವವರೆಗೂ ಮಾತ್ರ ಸರಿಯಾಗಿ ಸ್ಪಂದಿಸುತ್ತಿದ್ದರು ಹಣ ಪಡೆದ ನಂತರ ಅವಶ್ಯಕತೆ ಇದ್ದರೆ ಅದನ್ನು ತೆರೆದು ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ ಇಲ್ಲವಾದಲ್ಲಿ ಬಿಟ್ಟು ಹೋಗಿ ಎಂದು ಹೇಳುತ್ತಿದ್ದರು. ಕಮ್ಮಿ ಹಣದಲ್ಲಿ ಒಂದು ಸ್ವಂತ ಬಿಸಿನೆಸ್ ಆರಂಭ ಮಾಡಬಹುದು ಎಂದು ಕನಸು ಕಟ್ಟಿಕೊಂಡು ಇಂಥವರ ಹಿಂದೆ ಬಿದ್ದು ಹಣ ಕಳೆದುಕೊಂಡವರು ಅದೆಷ್ಟೋ ಜನ. ಹೆಸರಿಗೆ ಮಾತ್ರ ಆನ್‌ಲೈನ್ ಸರ್ವಿಸ್ ಕೊಡುತ್ತೇವೆಂದು ಮೊದಲಿಗೆ ತಿಳಿಸಿ ಹಣ ಪಡೆದ ನಂತರ ಯಾವುದೇ ಆನ್‌ಲೈನ್ ಸರ್ವಿಸ್‌ಗಳ ಸೌಲಭ್ಯವನ್ನು ಒದಗಿಸದೆ ಅದೆಷ್ಟೊ ಜನರಿಗೆ ಮೋಸ ಮಾಡಿದ್ದಾರೆ. ಇನ್ನೊಂದು ಮುಖ್ಯವಾದ ವಿಚಾರವೆಂದರೆ ಆನ್‌ಲೈನ್ ಸರ್ವಿಸ್ ಕೊಡುತ್ತೇವೆ ಎಂದು ಹೇಳಿಕೊಂಡು ಕಂಪನಿಯನ್ನು ತೆರೆದಿರುವ ಇವರುಗಳಿಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಇನ್ನಿತರ ದಾಖಲಾತಿಗಳನ್ನು ಮಾಡುವುದು ಹೇಗೆ ಎಂಬುದರ ಸಾಮಾನ್ಯ ಜ್ಞಾನವೂ ಇಲ್ಲ. ಇಂಥವರನ್ನು ನಂಬಿ ಹಣವನ್ನು ಕೊಟ್ಟವರ ಬುದ್ಧಿವಂತಿಕೆಯನ್ನು ಮೆಚ್ಚಲೇಬೇಕು. ಇವರಿಂದ ಮೋಸ ಹೋದವರು ಇವರ ಬೆನ್ನು ಬಿಡದೇ ಕಾಡಲು ಮುಂದಾದಾಗ ಸ್ಥಳಗಳನ್ನು ಬದಲಿಸುತ್ತಾ ಹೋದರು ಹಾಗೂ ಇವರಿಗೆ ಹಣಕೊಟ್ಟು ಮೋಸ ಹೋದವರು ಇವರಿಗೆ ಕರೆ ಮಾಡಿದರೆ ಇವರುಗಳೆ ಪೊಲೀಸರ ರೀತಿಯಲ್ಲಿ ಮಾತನಾಡುವುದು ಹಾಗೂ ರೌಡಿಗಳ ರೀತಿಯಲ್ಲಿ ಮಾತನಾಡಿ ಅಮಾಯಕರನ್ನು ಬೆದರಿಸುವ ಕೆಲಸ ಮಾಡುತ್ತಾರೆ. ಇವರ ವರ್ತನೆಗಳನ್ನು ಕಂಡು ಬೇಸತ್ತ ಅದೆಷ್ಟೋ ಜನರು ಹಣ ಬರದಿದ್ದರೂ ಪರವಾಗಿಲ್ಲ ಇವರುಗಳ ಸಹವಾಸ ಬೇಡವೆಂದು ಯಾವುದೇ ರೀತಿಯ ದೂರುಗಳನ್ನು ನೀಡದೆ ಹಣ ಕಳೆದುಕೊಂಡು ಸುಮ್ಮನಾಗಿದ್ದಾರೆ.
೩೦ ಸಾವಿರಕ್ಕೆ ಮುಗಿಯಲಿಲ್ಲ ಇವರುಗಳ ದಂದೆ!
ಆನ್‌ಲೈನ್ ಸರ್ವಿಸ್ ಮಾಡುವುದಕ್ಕೆ ಕಂಪನಿಯ ಫ್ರಾಂಚೈಸಿ ನೀಡುವುದಾಗಿ ಸುಳ್ಳು ಹೇಳಿ ೩೦,೦೦೦ ರೂಗಳನ್ನು ಪಡೆದು ಮೋಸ ಮಾಡುತ್ತಿದ್ದ ಇವರುಗಳ ದಂದೆ ಇಲ್ಲಿಗೆ ಮುಗಿಯಲಿಲ್ಲ ವರ್ಷಗಳು ಕಳೆದಂತೆ ಹೂಡಿಕೆಯ ಹಣವನ್ನು ಹೆಚ್ಚಿಸುತ್ತಾ ಹೋದರು. ೨೦೨೦ರಲ್ಲಿ ತಮ್ಮ ಕಂಪನಿಯ ಫ್ರಾಂಚೈಸಿ ಪಡೆದು ಶಾಖೆಗಳನ್ನು ತೆರೆಯಲು ಇಚ್ಚಿಸುವವರು ೨,೭೦,೦೦೦ ರೂಗಳನ್ನು ನೀಡಬೇಕೆಂದು ಬೇಡಿಕೆ ಇಟ್ಟರು. ೧,೪೦,೦೦೦ಕ್ಕೆ ಫರ್ನಿಚರ್ ಕೊಡಲಾಗುವುದು ೩೦,೦೦೦ ಮುಂಗಡ ಹಣ ಹಾಗೂ ೭೦,೦೦೦ ಅಂಗಡಿಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸುವುದಕ್ಕೆ ಹಾಗೂ ಇನ್ನುಳಿದ ೩೦ ಸಾವಿರವನ್ನು ತಮ್ಮ ವ್ಯಾಲೆಟ್‌ಗೆ ಹಾಕಲಾಗುವುದು ಎಂದು ಹೇಳಿ ಅವರ ಕಂಪನಿಯ ಫ್ರಾಂಚೈಸಿ ಪಡೆಯಲು ಇಚ್ಚಿಸುವವರ ಬಳಿ ೨,೭೦,೦೦೦ ರೂ ಹಣವನ್ನು ಮುಂಚಿತವಾಗಿಯೇ ಪಡೆಯುತ್ತಿದ್ದರು. ಹಣ ಪಡೆಯುವ ವರೆಗೂ ಮಾತ್ರ ಈ ರೀತಿಯ ಲೆಕ್ಕಗಳನ್ನು ಹೇಳುತ್ತಿದ್ದರು ಹಣ ಪಡೆದ ನಂತರ ಅದೆಷ್ಟೋ ಜನರಿಗೆ ಇವರುಗಳು ಹೇಳಿರುವ ರೀತಿಯಲ್ಲಿ ಯಾವುದೇ ಒಂದು ಸಾಮಾಗ್ರಿಗಳಗಲಿ ಅಥವಾ ಫರ್ನಿಚರ್ ಆಗಲಿ ತಲುಪಿರುವುದಿಲ್ಲ. ತಲುಪಿದ್ದರು ಹಾವುಗಳು ಕಳಪೆ ಗುಣಮಟ್ಟದ್ದಾಗಿದ್ದು ಕೆಲವೊಂದು ವಸ್ತುಗಳು ಬಳಕೆಯಾಗಿರುವ ವಸ್ತುಗಳಾಗಿವೆ. ದಿನಸಿಗಳಲ್ಲಂತೂ ಸ್ವಚ್ಛವಾಗಿ ಇರುವುದಕ್ಕಿಂತ ಹೆಚ್ಚಿನದಾಗಿ ಮುಳ್ಳುಗಳಿರುವ ದಿನಸಿಯನ್ನು ಕಳುಹಿಸುತ್ತಾರೆ. ಅಂತಹ ಕಳಪೆ ಗುಣಮಟ್ಟದ ದಿನಸಿಯನ್ನು ಕಳುಹಿಸಿದ್ದೀರಿ ಅದನ್ನು ಹಿಂದಿರುಗಿಸುತ್ತೇವೆ ಎಂದು ಫ್ರಾಂಚೈಸಿ ಪಡೆದವರು ಕೇಳಿದರೆ ನಿರಾಕರಿಸುತ್ತಾರೆ ಹಾಗೂ ಅಂಥವರ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುತ್ತಾರೆ ಹಾಗೂ ಯಾವುದೇ ರೀತಿಯ ಪ್ರತಿಕ್ರಿಯಿಸುವುದಿಲ್ಲ. ಮೋಸ ಹೋದವರು ಹೇಳುವ ಪ್ರಕಾರ ೨,೭೦,೦೦೦ ಹಣವನ್ನು ಪಡೆದು ಇವರಿಗೆ ನೀಡಿರುವ ಫರ್ನಿಚರ್ ಆಗಲಿ ಇನ್ನಿತರ ಸಾಮಗ್ರಿಗಳಗಲ್ಲಿ ೩೦ ಸಾವಿರಕ್ಕಿಂತ ಹೆಚ್ಚು ಬೆಲೆ ಬಾಳುವುದಿಲ್ಲ ಎಂದು. ಈ ರೀತಿ ಇವರುಗಳು ಮೋಸ ಮಾಡಿರುವುದನ್ನು ಪ್ರಶ್ನಿಸಿದರೆ ಅವರುಗಳು ಯಾವುದೇ ರೀತಿ ಪ್ರತಿಕ್ರಿಯಿಸುವುದಿಲ್ಲ ಹಾಗೊಂದು ವೇಳೆ ಇವರುಗಳು ಹಣ ಹಿಂತಿರುಗಿಸಲು ಕೇಳಿದ್ದಲ್ಲಿ ಇವರುಗಳ ವ್ಯಾಲಿಟ್‌ಗಳಲ್ಲಿ ಎಷ್ಟೇ ಸಾವಿರ ಹಣವಿದ್ದರೂ ಅದನ್ನು ಲೆಕ್ಕಿಸದೆ ವ್ಯಾಲೆಟ್‌ಗಳನ್ನು ಡಿ-ಆಕ್ಟಿವೇಟ್(ನಾಶ) ಮಾಡುತ್ತಾರೆ. ಹೀಗೆ ಮಾಡುವುದರಿಂದ ಇವರುಗಳ ವ್ಯಾಲೆಟ್‌ಗಳಲ್ಲಿರುವ ಹಣವೂ ಕೂಡ ಸಂಪೂರ್ಣವಾಗಿ ಅವರ ಕಂಪನಿಗೆ ಹೋಗುತ್ತದೆ. ಮೊದಲಿಗೆ ಇವರು ಕಂಪನಿಯನ್ನು ಬೆಂಗಳೂರಿನಲ್ಲಿ ಆರಂಭಮಾಡಿದ್ದು ಇವರಿಂದ ಮೋಸ ಹೋದವರು ಹೆಚ್ಚಾಗಿ ಅವರ ಕಚೇರಿಗೆ ಭೇಟಿ ನೀಡುತ್ತಿರುವುದನ್ನು ಅರಿತು ಇವರ ಕೇಂದ್ರ ಕಚೇರಿಯನ್ನು ಚಿತ್ರದುರ್ಗದ ಹಿರಿಯೂರಿಗೆ ವರ್ಗಾಯಿಸುತ್ತಾರೆ. ಚಿತ್ರದುರ್ಗದ ಹಿರಿಯೂರಿನಲ್ಲಿ ಎರಡು ಅಂತಸ್ತಿನ ಕಟ್ಟಡ ಒಂದರಲ್ಲಿ ಸುಮಾರು ೨೦ ಕಂಪ್ಯೂಟರ್ಗಳನ್ನು ಹಾಕಿಕೊಂಡು ಇಪ್ಪತ್ತರಿಂದ ಮೂವತ್ತು ಜನ ಕೆಲಸಗಾರರನ್ನು ಇಟ್ಟುಕೊಂಡು ವಂಚನೆ ಮಾಡುವುದನ್ನು ಮುಂದುವರಿಸಿರುತ್ತಾರೆ. ಮತ್ತೊಂದು ವಿಚಾರವೆಂದರೆ ಇವರ ಕಂಪನಿಯಲ್ಲಿ ಕೆಲಸ ಮಾಡುವಂತವರಿಗೆ ಇವರಗಳು ಈ ರೀತಿ ಮೋಸ ಮಾಡುತ್ತಾರೆ ಎಂಬುದರ ಬಗ್ಗೆ ಅರಿವೇ ಇರಲಿಲ್ಲ ಹಾಗೂ ಎಷ್ಟೋ ಜನರಿಗೆ ಸಂಬಳವನ್ನು ಕೊಡದೆ ಹೆಣಗಿಸುತ್ತಿದ್ದಾರೆ. ಮೋಸ ಮಾಡಲು ಅನುಕೂಲವಾಗಲೆಂದು ಸ್ಥಳೀಯ ಯಾರೊಬ್ಬರನ್ನು ಕೆಲಸಕ್ಕೆ ತೆಗೆದುಕೊಳ್ಳದೆ ದೂರದೂರಿನಿಂದ ಕೆಲಸಕ್ಕೆ ಕರೆಸಿಕೊಳ್ಳುತ್ತಾರೆ. ಮೋಸ ಹೋದವರು ಇವರುಗಳು ಜಾಗವನ್ನು ಬದಲಾಯಿಸಿರುವುದನ್ನು ಹಾರಿತು ಹಿರಿಯೂರಿಗು ಕೂಡ ಭೇಟಿ ನೀಡಿ ಇವರ ಬೆನ್ನು ಬಿಡದೇ ಕಾಡಲು ಮುಂದಾದಾಗ ರಾತ್ರೋರಾತ್ರಿ ಕಟ್ಟಡ ಮಾಲೀಕನಿಗೆ ಬಾಡಿಗೆಯನ್ನೂ ನೀಡದೆ ಕಚೇರಿಯನ್ನು ಹಿರಿಯೂರಿನಿಂದ ಸ್ವಲ್ಪದೂರದಲ್ಲಿರುವ ನ್ಯಾಷನಲ್ ಹೈವೇ ಪಕ್ಕದ ಗೋಡನ್ ಒಂದಕ್ಕೆ ತಮ್ಮ ಕಚೇರಿಯನ್ನು ವರ್ಗಾಯಿಸಿ ಕೊಳ್ಳುತ್ತಾರೆ. ಇವರ ಕಂಪನಿಯನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವರ್ಗಾಯಿಸುವುದರ ಜೊತೆಗೆ ಹೆಸರನ್ನು ಕೂಡ ಬದಲಾಯಿಸುತ್ತಾ ಹೋಗುತ್ತಾರೆ. ಪ್ರಸ್ತುತ ಈ ಕಂಪನಿಯ ಹೆಸರು ಗ್ರಾಮೋದ್ದಾರ ಕೇಂದ್ರ. ಈಗಲೂ ಕೂಡ ಈ ಕಂಪನಿಯ ಫ್ರಾಂಚೈಸಿ ಪಡೆದ ಅದೆಷ್ಟೋ ಜನರಿಗೆ ಇವರುಗಳು ಸ್ಥಳಗಳನ್ನು ಬದಲಾಯಿಸುವುದಾಗಲಿ ಅಥವಾ ಹೆಸರನ್ನು ಬದಲಾಯಿಸುವುದರ ಬಗ್ಗೆಯಾಗಲಿ ತಿಳಿಸಿರುವುದಿಲ್ಲ. ಇಷ್ಟೆಲ್ಲಾ ಅಕ್ರಮಗಳನ್ನು ನಡೆಸಿದ್ದರು ಇವರುಗಳ ವಿರುದ್ಧ ಮೋಸ ಹೋದವರು ಯಾರೊಬ್ಬರು ದೂರುಗಳನ್ನು ದಾಖಲಿಸಿಲ್ಲ. ದೂರುಗಳನ್ನು ದಾಖಲಿಸಿಲ್ಲ ಎಂದು ತಕ್ಷಣ ಎಲ್ಲರ ತಲೆಯಲ್ಲಿ ಬರುವುದು ಒಂದೇ ವಿಚಾರ ಸಿನಿಮಾಗಳಲ್ಲಿ ಬರುವ ಹಾಗೆ ಕಪ್ಪು ಹಣ ಬಳಸಿ ವ್ಯವಹಾರ ಮಾಡಿರಬೇಕೆಂದು. ಆದರೆ ಅಸಲಿಯ ವಿಚಾರ ಹಾಗಲ್ಲ. ಇದರಲ್ಲಿ ಹೂಡಿಕೆ ಮಾಡಿ ಫ್ರಾಂಚೈಸಿ ಪಡೆದಿರುವ ಅಷ್ಟು ಜನರು ಸಾಮಾನ್ಯವಾಗಿ ಜೀವನ ನಡೆಸುವಂತವರು ಮತ್ತು ಚಿಕ್ಕ ವಯಸ್ಸಿನವರು ಹಾಗೂ ಸ್ವಲ್ಪ ಮಟ್ಟದಲ್ಲಿ ಹಣವನ್ನು ಹೂಡಿಕೆ ಮಾಡಿ ಬಿಸಿನೆಸ್ ಮಾಡಬೇಕೆಂದು ಕನಸು ಕಟ್ಟಿ ಕೊಂಡಿದ್ದವರು ಇವರುಗಳು ಕಪ್ಪು ಹಣ ಇಟ್ಟುಕೊಳ್ಳುವುದಿರಲ್ಲಿ ಅದರ ಬಗ್ಗೆ ಇವರುಗಳಿಗೆ ಆಲೋಚನೆಯೇ ಇರುವುದಿಲ್ಲ. ಆದರೂ ಇವರುಗಳು ದೂರು ಕೊಡದೇ ಇರಲು ಕಾರಣವೇನೆಂದರೆ ಈ ಕಂಪನಿಯ ಮೂರು ಜನ ಮುಖ್ಯಸ್ಥರಲ್ಲಿ ಒಬ್ಬನಾದಂತಹ ಗಿರೀಶ್ ಎಂಬಾತನೇ ಇವರುಗಳು ದೂರು ಕೊಡದಿರಲು ಕಾರಣ. ಅದೇನೆಂದರೆ ಈ ಕಂಪನಿಯ ಫ್ರಾಂಚೈಸಿ ಪಡೆಯಲು ಹಣವನ್ನು ಹೂಡಿಕೆ ಮಾಡಿ ಮೋಸ ಹೋದ ನಂತರ ಕಂಪನಿಯವರ ವಿರುದ್ಧ ತಿರುಗಿಬಿದ್ದು ಪ್ರಶ್ನಿಸಲು ಮುಂದಾದಾಗ, ಗಿರೀಶ್ ಎಂಬಾತನು ತಾನು ಒಬ್ಬ ಡಿ.ವೈ.ಎಸ್.ಪಿ ಎಂದು ಹೇಳಿಕೊಂಡು ಕರೆಮಾಡಿ ಇವರುಗಳನ್ನು ಹೆದರಿಸುತ್ತಾನೆ ಹಾಗೂ ಮತ್ತೆ ಇದೇ ಗಿರೀಶನೆ ರೌಡಿ ಎಂದು ಹೇಳಿಕೊಂಡು ಕೂಡ ಕರೆಮಾಡಿ ಹೆದರಿಸುತ್ತಾನೆ. ಪ್ರಸ್ತುತ ಗಿರೀಶನ ಸಂಖ್ಯೆಯನ್ನು ಟ್ರೂಕಾಲರ್‌ನಲ್ಲಿ ಹುಡುಕಿದರೆ ಡಿ.ವೈ.ಎಸ್.ಪಿ ಗಿರೀಶ್ ಎಂದು ತೋರಿಸುತ್ತದೆ. ಅಚ್ಚರಿಯ ವಿಚಾರವೆಂದರೆ ಈ ಗಿರೀಶನಿಗೆ ೧೯ ರಿಂದ ೨೦ ವಯಸ್ಸಿರಬೇಕು. ಈ ಚಿಕ್ಕ ವಯಸ್ಸಿಗೆ ಡಿ.ವೈ.ಎಸ್.ಪಿ ಯಾಗಿರುವುದು ಈ ಜಗತ್ತಲ್ಲಿ ಈ ಮಹಾನುಭಾವನೊಬ್ಬನೇ ಇರಬೇಕು. ಈ ರೀತಿ ಕರೆಮಾಡಿ ಬೆದರಿಸುವುದರಿಂದ ಪೊಲೀಸರು ಹಾಗೂ ರೌಡಿಗಳು ಇವರ ಬೆಂಬಲಕ್ಕಿದ್ದಾರೆ ಎಂದು ಭಾವಿಸಿ ನೊಂದ ಯಾರೊಬ್ಬರು ಇಲ್ಲಿಯತನಕ ದೂರನ್ನು ನೀಡಿರುವುದಿಲ್ಲ. ಈ ರೀತಿ ಬೆದರಿಸುವ ಕೆಲಸ ಗಿರೀಶನ್ನು ಮಾಡುತ್ತಿದ್ದರೆ ಕೌಶಿಕ್ ಹಾಗೂ ಕಾವ್ಯ ಫೇಸ್ಬುಕ್ ಮತ್ತು ಯೂಟ್ಯೂಬ್‌ಗಳಲ್ಲಿ ಇವರ ಕಂಪನಿಗಳ ಜಾಹೀರಾತನ್ನು ಹಾಕಿಕೊಂಡು ಮೋಸ ಮಾಡಲು ಹೊಸಬರನ್ನು ಹುಡುಕುತ್ತಿರುತ್ತಾರೆ.
ಭ್ರಷ್ಟರ ಬೇಟೆ ಪತ್ರಿಕಾ ಕಚೇರಿಗೆ ಇವರ ಕಂಪನಿಯ ಮೋಸದ ಬಗ್ಗೆ ಕರೆಗಳು ಬರಲು ಮುಂದಾದಾಗ ನಾವುಗಳು ಈ ಕಂಪನಿಯವರ ಹಿಂದೆ ಬೀಳುತ್ತೇವೆ. ಒಬ್ಬರಿಗೆ ಅಥವಾ ಇಬ್ಬರಿಗೆ ಈ ರೀತಿ ಮೋಸವಾಗಿರಬಹುದು ಎಂದು ತಿಳಿದಿದ್ದ ನಮಗೆ ಅಚ್ಚರಿಯೊಂದು ಕಾದಿತ್ತು. ಅದೇನೆಂದರೆ ಈ ಮೋಸದ ಕಂಪನಿಯವರನ್ನು ಹುಡುಕುತ್ತಾ ಹೋದಾಗ ಇವರುಗಳು ಹಿರಿಯೂರಿನಲ್ಲಿ ಸಿಕ್ಕಿಬೀಳುತ್ತಾರೆ ಆ ಸಂದರ್ಭದಲ್ಲಿ ನಮ್ಮ ಬಳಿ ಇದ್ದ ಇಬ್ಬರಿಂದ ಮೂರು ಜನ ಮೋಸ ಹೋದವರಿಗೆ ಹಣವನ್ನು ಹಿಂತಿರುಗಿಸುವುದಾಗಿ ಒಪ್ಪಿಕೊಳ್ಳುತ್ತಾರೆ ಹಾಗೂ ಹಣವನ್ನು ಹಿಂತಿರುಗಿಸುತ್ತಾರೆ. ಇದಾದ ಬಳಿಕ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇವರುಗಳಿಂದ ಮೋಸ ಹೋದವರು ಉಡುಪಿ, ಚಿತ್ರದುರ್ಗ, ತುಮಕೂರು, ಮಂಡ್ಯ, ಬಳ್ಳಾರಿ ಹಾಗೂ ಇನ್ನಿತರ ಜಿಲ್ಲೆಗಳಿಂದ ಭ್ರಷ್ಟರ ಬೇಟೆ ಪತ್ರಿಕಾ ಕಚೇರಿಗೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಳ್ಳಲು ಮುಂದಾಗಿದ್ದಾರೆ. ಪ್ರಸ್ತುತ ೧೦ ರಿಂದ ೨೦ ಜನ ಇವರುಗಳಿಂದ ಮೋಸ ಹೋದವರು ನಮ್ಮ ಬಳಿ ಇದ್ದು ಅವರುಗಳು ಹೇಳುವ ಪ್ರಕಾರ ನೂರಕ್ಕಿಂತ ಅಧಿಕ ಜನರ ಬಳಿ ಇವರುಗಳು ಈ ರೀತಿ ಹಣವನ್ನು ಪಡೆದು ಮೋಸ ಮಾಡಿದ್ದಾರೆಂದು. ಕೆಲವೊಬ್ಬರು ಸಾವಿರಗಳಲ್ಲಿ ಹಣ ಕಳೆದುಕೊಂಡರೆ ಕೆಲವೊಬ್ಬರು ಲಕ್ಷಗಳಲ್ಲಿ ಹಣ ಕಳೆದುಕೊಂಡಿದ್ದಾರೆ ಒಟ್ಟಿನಲ್ಲಿ ಇವರುಗಳೆಲ್ಲಾ ಮೋಸ ಹೋದವರೆ. ಪ್ರಸ್ತುತ ಈ ಕಂಪನಿಯವರು ಹಿರಿಯೂರಿನಿಂದಲು ಕಾಲ್ಕಿತ್ತಿದ್ದಾರೆ. ಒಮ್ಮೆ ಅವರನ್ನು ಹಿಡಿಯಲು ಆರು ತಿಂಗಳಷ್ಟು ಸಮಯ ತೆಗೆದುಕೊಂಡಿತ್ತು ಮತ್ತೊಮ್ಮೆ ಅವರುಗಳು ಸಿಗುತ್ತಾರೋ ಇಲ್ಲವೋ ಗೊತ್ತಿಲ್ಲ? ಸಿಕ್ಕರೆ ಮೋಸಹೋದ ಜನರಿಗೆ ಅವರ ಹಣವನ್ನು ಹಿಂತಿರುಗಿಸುವಂತ್ತೆ ಮಾಡುತ್ತೇವೆ. ಇಷ್ಟೆಲ್ಲಾ ಓದಿದ ಮೇಲೆ ತಮಗೆ ಒಂದು ಅನುಮಾನ ಮೂಡಬಹುದು ಅದೇನೆಂದರೆ ತಾವುಗಳೆ ಇವರ ವಿರುದ್ಧ ದೂರು ದಾಖಲಿಸಬಹುದಿತ್ತಲ್ಲವೆಂದು ದಾಖಲಿಸಬಹುದಿತ್ತು ಆದರೆ ಈ ಕಂಪನಿಯವರ ವಿರುದ್ಧ ಯಾರೊಬ್ಬರ ಬಳಿಯೂ ಪೂರ್ವಕವಾದ ದಾಖಲೆಗಳಿಲ್ಲ ಮತ್ತೊಂದು ಮುಖ್ಯವಾದ ವಿಚಾರವೇನೆಂದರೆ ಕಂಪನಿಯವರು ಮೋಸ ಹೋದವರ ಕಡೆಯಿಂದ ಯಾವುದೇ ರೀತಿ ಸಮಸ್ಯೆ ಯಾಗದಿರುವ ರೀತಿಯಲ್ಲಿ ಅಗ್ರಿಮೆಂಟ್‌ಗಳನ್ನು ಮಾಡಿಸಿಕೊಂಡಿದ್ದಾರೆ. ಆದರೆ ಫ್ರಾಂಚೈಸಿ ಪಡೆದವರಿಗೆ ಮೋಸವಾಗದ ರೀತಿಯಲ್ಲಿ ಯಾವುದೇ ಒಂದು ಅಂಶವನ್ನು ಕೂಡ ಅಗ್ರಿಮೆಂಟ್ನಲ್ಲಿ ಸೇರಿಸುವುದಿಲ್ಲ. ದಾಖಲೆಗಳಿರುವ ಪ್ರಕರಣಗಳೇ ಎಷ್ಟೋ ವರ್ಷಾನುಗಟ್ಟಲೆ ನ್ಯಾಯಾಲಯದಲ್ಲಿ ಉಳಿಯುತ್ತವೆ. ಅಂತಹ ಸಂದರ್ಭದಲ್ಲಿ ಯಾವುದೇ ದಾಖಲೆ ಇಲ್ಲದ ಇಂತಹ ಕಂಪನಿಯ ವಿರುದ್ಧ ದೂರು ದಾಖಲಿಸಿದರೆ ಮೋಸ ಹೋದವರಿಗೆ ಹಣ ಹಿಂತಿರುಗುವ ಸಾಧ್ಯತೆ ಕಡಿಮೆ. ಈ ವರದಿ ಮಾಡುವ ಮುಖ್ಯ ಉದ್ದೇಶವೇನೆಂದರೆ ಮೋಸ ಹೋದವರ ಹಣ ಹಿಂತಿರುಗುವುದೋ? ಇಲ್ಲವೋ? ತಿಳಿದಿಲ್ಲ. ಆದರೆ ಮುಂದೆ ಯಾರೊಬ್ಬರೂ ಹೊಸ-ಹೊಸ ಹೆಸರುಗಳಲ್ಲಿ ಬರುವ ಇಂತಹ ಮೋಸದ ಕಂಪನಿಯ ಫ್ರಾಂಚೈಸಿ ಪಡೆದು ಹಣ ಕಳೆದುಕೊಳ್ಳದಿರಲಿ ಎಂಬುದು ನಮ್ಮ ಪತ್ರಿಕೆಯ ಉದ್ದೇಶವಾಗಿದೆ.
Part 2 – https://www.brastarabete.com/daylight-robbery-of-gramoddhara-center-part-2/