
ದೆಹಲಿಯ ರೈಲ್ವೇ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಕಾಲುತುಳಿತದಲ್ಲಿ 15ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ರೈಲ್ವೇ ಸಚಿವಾಲಯವು ಮೃತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದೆ. ಅಲ್ಲದೆ, ಇತರ ಗಾಯಾಳುಗಳಿಗೆ 1 ಲಕ್ಷ ರೂಪಾಯಿ ಪರಿಹಾರವನ್ನು ಒದಗಿಸಲಾಗುವುದು.
ರೈಲ್ವೇ ಸಚಿವರ ಸಂತಾಪ
ಘಟನೆಯ ಬಗ್ಗೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸಂತಾಪ ವ್ಯಕ್ತಪಡಿಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. “ಈ ದುರ್ಘಟನೆ ತುಂಬಾ ದುಃಖಕರ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ” ಎಂದು ಅವರು ಬರೆದಿದ್ದಾರೆ.
ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ಪ್ರಯಾಣಿಕರ ದುರಂತ
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಲು ಸಾವಿರಾರು ಮಂದಿ ದೆಹಲಿಯ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ಕೆಲವು ರೈಲುಗಳ ವಿಳಂಬದ ಕಾರಣದಿಂದ ಪ್ಲಾಟ್‌ಫಾರ್ಮ್ ಸಂಖ್ಯೆ 14ರ ಬಳಿ ಜನಜಾತ್ರೆ ಉಂಟಾಗಿ ಕಾಲ್ತುಳಿತ ಸಂಭವಿಸಿದೆ.
ಪ್ರಮುಖ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯಕೀಯ ತಂಡಗಳು ಕಾರ್ಯನಿರತವಾಗಿವೆ. ರೈಲ್ವೇ ಇಲಾಖೆ ಹಾಗೂ ಸ್ಥಳೀಯ ಆಡಳಿತ ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿದೆ.