
ಡ್ರಿಂಕ್ ಅಂಡ್ ಡ್ರೈವ್ (Drink and Drive) ತಪಾಸಣೆ ವೇಳೆ ಪೊಲೀಸರು ಲಂಚಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಎಂಬ ಗಂಭೀರ ಆರೋಪವೊಂದು ಮಾಡಲಾಗಿದೆ. ವಾಹನ ಸವಾರನೊಬ್ಬ, ಪೊಲೀಸ್ ಅಧಿಕಾರಿಗಳು ₹3 ಸಾವಿರ ಲಂಚಕ್ಕೆ ಒತ್ತಾಯಿಸಿದರು, ನಗದು ಕೊಡಲು ಸಾಧ್ಯವಿಲ್ಲ, ಗೂಗಲ್ ಪೇ ಮಾಡುತ್ತೇನೆ ಎಂದಾಗ ನಿರಾಕರಿಸಿದರು ಎಂದು ದೂರು ನೀಡಿದ್ದಾರೆ.
ಲಂಚದ ಬೇಡಿಕೆ ಆರೋಪ
ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು, ಅದನ್ನು ಕೋರ್ಟ್ನಲ್ಲಿ ಪಾವತಿಸಬೇಕು ಎಂಬ ನಿಯಮವಿದೆ. ಆದರೆ, ವಿಜಯನಗರ ಸಂಚಾರಿ ಠಾಣೆ ಪೊಲೀಸರು ನೇರವಾಗಿ ಹಣ ಕೇಳಿದರಂತೆ. ಈಶ್ವರ್ ಎಂಬ ಬೈಕ್ ಸವಾರನ ಪ್ರಕಾರ, ಮಾರ್ಚ್ 14ರ ರಾತ್ರಿ ಜಿಟಿ ಮಾಲ್ ಬಳಿ ಪೊಲೀಸರು ತಪಾಸಣೆ ಮಾಡುತ್ತಿದ್ದರು. ಆರ್ಎಕ್ಸ್ ಬೈಕ್ನಲ್ಲಿ ಮದ್ಯ ಸೇವಿಸಿ ಬರುತ್ತಿದ್ದ ಈಶ್ವರ್ ಅವರನ್ನು ತಡೆದು, “₹10 ಸಾವಿರ ದಂಡ ಆಗುತ್ತದೆ, ₹3 ಸಾವಿರ ನೀಡಿದರೆ ಬಿಟ್ಟುಕೊಡುತ್ತೇವೆ” ಎಂದು ತಿಳಿಸಿದ್ದರಂತೆ.
ಈಶ್ವರ್ ನಗದು ಇಲ್ಲವೆಂದು ಗೂಗಲ್ ಪೇ ಮಾಡಲು ಯತ್ನಿಸಿದಾಗ, ಪೊಲೀಸರು ಕೇವಲ ನಗದು ಬೇಕು ಎಂದು ಒತ್ತಾಯಿಸಿದ್ರಂತೆ. ಈಶ್ವರ್ ಕೋರ್ಟ್ನಲ್ಲಿ ಪೂರ್ಣ ದಂಡ ಪಾವತಿಸುತ್ತೇನೆ ಎಂದಾಗ, ಅವರ ಬೈಕ್ ಅನ್ನು ಠಾಣೆಗೆ ವಾಪಸು ತೆಗೆದುಕೊಂಡು ಹೋಗಿದ್ದಾರೆ.
ಠಾಣೆಯಲ್ಲಿ ಹಲ್ಲೆ ಆರೋಪ
ಮಾರ್ಚ್ 15ರಂದು ಕೋರ್ಟ್ನಲ್ಲಿ ₹13 ಸಾವಿರ ದಂಡ ಪಾವತಿಸಿದ ಈಶ್ವರ್, ಮಾರ್ಚ್ 16ರಂದು ತನ್ನ ಸ್ನೇಹಿತನೊಂದಿಗೆ ಬೈಕ್ ವಾಪಸು ಪಡೆಯಲು ವಿಜಯನಗರ ಸಂಚಾರಿ ಪೊಲೀಸ್ ಠಾಣೆಗೆ ತೆರಳಿದ್ದರು. ಅದೇ ಸಂದರ್ಭದಲ್ಲಿ, ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ರಂತೆ.
ಆಸ್ಪತ್ರೆಯಿಂದ ವಿಡಿಯೋ ಮೂಲಕ ದೂರು
ಈಶ್ವರ್ ಹಲ್ಲೆಯ ಬಗ್ಗೆ ವಿಡಿಯೋ ಮಾಡಿದ್ದು, “ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೂಟ್ ನಿಂದ ಒದ್ದಿದ್ದಾರೆ. ಹಲ್ಲೆಯಿಂದ ನಾನು ಅಸ್ವಸ್ಥನಾಗಿದ್ದೆ, ಸ್ನೇಹಿತರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ” ಎಂದು ಹೇಳಿದ್ದಾರೆ.
ಪೊಲೀಸ್ ಇಲಾಖೆಯಿಂದ ತನಿಖೆ
ಈ ಪ್ರಕರಣ ಸಂಬಂಧ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನಿತಾ ಹದ್ದಣ್ಣನವರ್ ಅವರು ವರದಿ ಕೇಳಿದ್ದಾರೆ. ಎಸಿಪಿ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.