ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಸಿನಿಮಾ ಎಂದರೆ ಅದು ‘ಕೆಜಿಎಫ್; ಚಾಪ್ಟರ್ 2’. ಈ ಸಿನಿಮಾ ರಿಲೀಸ್ ಆಗಿದ್ದೇ ತಡ, ಇಡೀ ಭಾರತೀಯ ಚಿತ್ರರಂಗವೇ ಕರುನಾಡಿನತ್ತ ಹೊರಳಿತು. ನಟ ಯಶ್ ಪ್ಯಾನ್ ಇಂಡಿಯಾ ಸೆನ್ಸೆಷನ್ ಸ್ಟಾರ್ ಆಗಿ ಹೊರಹೊಮ್ಮಿದರು. ಕೇವಲ ಯಶ್ ಮಾತ್ರವಲ್ಲ ನಟಿ ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್, ಛಾಯಾಗ್ರಾಹಕ ಭುವನ್ ಗೌಡ ಹೆಸರು ಮಾಡಿದರು.
ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಹಲವು ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದರೆ, ಇತ್ತ ಈ ಚಿತ್ರದ ಕಲಾವಿದರು, ತಂತ್ರಜ್ಞರೂ ಸಹ ಬಿಜಿಯಾಗಿದ್ದಾರೆ. ನಟ ಯಶ್ ಸಹ ಇನ್ನೇನು ಏಪ್ರಿಲ್ ತಿಂಗಳ ಕೊನೆಯಲ್ಲಿ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡಲಿದ್ದಾರೆ. ನಟಿ ಶ್ರೀನಿಧಿ ಶೆಟ್ಟಿ ಸಹ ತಮಿಳಿನ ಕೋಬ್ರಾ ಸಿನಿಮಾದಲ್ಲಿ ನಟಿಸುವ ಮೂಲಕ ಕಾಲಿವುಡ್‌ನಲ್ಲಿ ಖಾತೆ ತೆರೆದರು. ಇನ್ನೇನು ಹೊಸ ಸಿನಿಮಾಗಳನ್ನೂ ಒಪ್ಪಿಕೊಂಡಿದ್ದಾರೆ. ಹೀಗಿರುವಾಗಲೇ ಇದೇ ನಟಿಯ ವಿರುದ್ಧವೀಗ ಯಶ್ ಅಭಿಮಾನಿಗಳು ಗರಂ ಆಗಿದ್ದಾರೆ!
ಕೆಜಿಎಫ್ ಸಿನಿಮಾದ ಶೂಟಿಂಗ್ ಸೆಟ್‌ನಲ್ಲಿ ನಟ ಯಶ್ ಅವರಿಂದ ಶ್ರೀನಿಧಿ ಶೆಟ್ಟಿ ಕಿರುಕುಳ ಅನುಭವಿಸಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉಮೈರ್ ಸಂಧು ಈ ವಿಚಾರವನ್ನು ಟ್ವಿಟ್ ಮಾಡಿದ್ದು, ನಟಿ ಶ್ರೀನಿಧಿ ಶೆಟ್ಟಿಯ ಹೇಳಿಕೆಯನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಸೆಟ್‌ನಲ್ಲಿ ಯಶ್ ಅವರಿಂದ ನಾನು ಸಾಕಷ್ಟು ಮುಜುಗರಕ್ಕೊಳಗಾಗಿದ್ದೇನೆ. ಇನ್ನೆಂದೂ ನಾನು ಯಶ್ ಜೊತೆ ಕೆಲಸ ಮಾಡಲ್ಲ. ಆತ ವಿಷಕಾರಿ, ಕಿರುಕುಳ ನೀಡುವ ವ್ಯಕ್ತಿತ್ವ” ಎಂದು ಉಮೈರ್ ಸಂಧು ಶ್ರೀನಿಧಿ ಹೇಳಿದ್ದಾರೆಂದು ಪೋಸ್ಟ್ ಮಾಡಿದ್ದಾರೆ.
ಶ್ರೀನಿಧಿ ಸ್ಪಷ್ಟನೆ..
ಈ ಟ್ವಿಟರ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಯಶ್ ಅಭಿಮಾನಿಗಳು ಗರಂ ಆಗಿದ್ದರು. ನಟಿಯ ವಿರುದ್ಧ ತಿರುಗಿ ಬಿದ್ದಿದ್ದರು. ಅಭಿಮಾನಿಗಳ ಈ ವರ್ತನೆ ಕಂಡು ಸುದ್ದಿಯ ಸತ್ಯಾಸತ್ಯತೆ ತಿಳಿದ ಶ್ರೀನಿಧಿ, ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದೊಂದು ಸುಳ್ಳು ಸುದ್ದಿ, ಆ ರೀತಿಯ ಯಾವ ಅನುಭವವವೂ ನನಗಾಗಿಲ್ಲ. ಇದೆಲ್ಲವೂ ಸುಳ್ಳು ಎಂದಿದ್ದಾರೆ.
‘ಕೆಲವರು ಸುಳ್ಳು ಪ್ರಚಾರ ಮತ್ತು ವದಂತಿಗಳನ್ನು ಹಬ್ಬಿಸಲು ಸೋಷಿಯಲ್ ಮೀಡಿಯಾ ಬಳಸುತ್ತಾರೆ. ಇದು ಪ್ರೀತಿಯನ್ನು ಹರಡುವ ತಾಣ ಎಂದು ನಾನು ಭಾವಿಸುತ್ತೇನೆ. ಯಶ್ ಜತೆ ಕೆಲಸ ಮಾಡಲು ನಾನು ನಿಜಕ್ಕೂ ಅದೃಷ್ಟಮಾಡಿದ್ದೆ. ಅವರೊಬ್ಬ ರಿಯಲ್ ಜೆಂಟಲ್‌ಮ್ಯಾನ್, ಒಬ್ಬ ಮೆಂಟರ್, ಅಷ್ಟೇ ಒಳ್ಳೆಯ ಸ್ನೇಹಿತ, ನನ್ನ ಸ್ಫೂರ್ತಿ. ಇದೆಲ್ಲದಕ್ಕಿಂತ ಹೆಚ್ಚಾಗಿ ನಾನು ರಾಕಿಂಗ್ ಸ್ಟಾರ್ ಯಶ್ ಅವರ ಬಹುದೊಡ್ಡ ಅಭಿಮಾನಿ” ಎಂದಿದ್ದಾರೆ ಶ್ರೀನಿಧಿ.
🌸🙏🏻🤗@TheNameIsYash ⭐️ pic.twitter.com/iAo6xCJjU1
— Srinidhi Shetty (@SrinidhiShetty7) March 16, 2023