ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸುವ ಮೂಲಕ ಆರ್‌ಸಿಬಿ ಮಹಿಳಾ ತಂಡ ತನ್ನ ಎರಡನೇ ಆವೃತ್ತಿಯಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ 16 ವರ್ಷಗಳ ಟ್ರೋಫಿ ಕನಸನ್ನು ನನಸಾಗಿಸಿದೆ. ಆರ್‌ಸಿಬಿ ಪುರುಷರ ತಂಡಕ್ಕಿಂತ ಮುನ್ನ ಮಹಿಳಾ ತಂಡ ಟ್ರೋಫಿ ಗೆದ್ದಿರುವುದು ವಿಶೇಷವಾಗಿದೆ. 2024ರ ಐಪಿಎಲ್‌ಗೆ ಮುನ್ನ ಬುಧವಾರ, ಮಾರ್ಚ್ 19ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ “ಆರ್‌ಸಿಬಿ ಅನ್‌ಬಾಕ್ಸ್’ ಈವೆಂಟ್‌ಗೆ ಚೊಚ್ಚಲ ಟ್ರೋಫಿಯೊಂದಿಗೆ ಆರ್‌ಸಿಬಿ ಮಹಿಳಾ ತಂಡ ತವರಿಗೆ ಮರಳಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಉತ್ತಮ ಆರಂಭದ ಹೊರತಾಗಿಯೂ ಆರ್‌ಸಿಬಿ ಸ್ಪಿನ್ನರ್‌ಗಳ ಮಾರಕ ದಾಳಿಗೆ ಸಿಲುಕಿ 18.3 ಓವರ್‌ಗಳಲ್ಲಿ ಕೇವಲ 113 ರನ್‌ಗಳಿಗೆ ಸರ್ವಪತನ ಕಂಡಿತು.
ಪ್ರಶಸ್ತಿ ಗೆಲುವಿಗೆ 114 ರನ್‌ಗಳ ಗುರಿ ಪಡೆದ ಆರ್‌ಸಿಬಿ ತಂಡ ಸೋಫಿ ಡಿವೈನ್, ಸ್ಮೃತಿ ಮಂಧಾನ ಮತ್ತು ಎಲ್ಲಿಸ್ ಪೆರ್ರಿ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 2 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.
ಗೆಲುವಿಗೆ ಕೊನೆಯ ಓವರ್‌ನಲ್ಲಿ ಆರ್‌ಸಿಬಿ ತಂಡಕ್ಕೆ 5 ರನ್ ಬೇಕಾಗಿದ್ದಾಗ ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ ಆಟವಾಡುತ್ತಿದ್ದು ಕೊನೆಯ ಓವರ್ ನ ಮೂರನೇ ಬಾಲಿನಲ್ಲಿ ರಿಚಾ ಘೋಷ್ ಬೌಂಡರಿ ಬಾರಿಸುವ ಮೂಲಕ ಆರ್‌ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಪ್ರತಿ ಬಾರಿಯೂ ಅಭಿಮಾನಿಗಳು ‘ಈ ಸಲ ಕಪ್ ನಮ್ದೇ’ ಎಂದು ಹೇಳಿಕೊಳ್ಳುತ್ತಿದ್ದರು ಆದರೆ ಈ ಬಾರಿ ಮಹಿಳೆಯರಿಂದ ಅಭಿಮಾನಿಗಳ ಕನಸು ನನಸಾಗಿದೆ.