
ಬೆಳ್ಳೂರು ತಾಲ್ಲೂಕಿನ ಕೆಂಬಾರೆ ಗ್ರಾಮದಲ್ಲಿ ನಡೆದ ಒಂದು ದುರ್ಭಾಗ್ಯಕರ ಘಟನೆಯು ಸ್ಥಳೀಯರನ್ನು ಬೆಚ್ಚಿಬಿಟ್ಟಿದೆ. ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಗೀತಾ–ಮಹೇಶ್ ದಂಪತಿಯವರ ವಾಹನಕ್ಕೆ ಗುರುವಾರ ಮಧ್ಯರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.
ಅಶೋಕ್ ಲೈಲ್ಯಾಂಡ್ ವಾಹನವೊಂದು ಹಾಗೂ ಅದರೊಳಗೆ ಇಡಲಾಗಿದ್ದ ಸುಮಾರು ₹2 ಲಕ್ಷ ಮೌಲ್ಯದ ಆಟಿಕೆ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಒಟ್ಟು ನಷ್ಟದ ಅಂದಾಜು ₹7 ಲಕ್ಷದಷ್ಟಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ದಂಪತಿ ಮಕ್ಕಳ ಆಟದ ಸಾಮಗ್ರಿಗಳನ್ನು ಖರೀದಿಸಲು ಸಾಲ ಪಡೆದಿದ್ದನ್ನು ಹೇಳಿದ ಮಹೇಶ್, “ಹಬ್ಬದ ವೇಳೆಗೆ ವ್ಯಾಪಾರಕ್ಕಾಗಿ ಬೆನ್ನೆಲುಬಾಗಿ ಇರುವ ಈ ವಾಹನವನ್ನು ಮನೆ ಮುಂದೆ ನಿಲ್ಲಿಸಿದ್ದೆವು. ಆದರೆ ರಾತ್ರಿ 2.30ರ ಸುಮಾರಿಗೆ ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಹೊತ್ತಿಕೊಂಡಿದೆ. ನಾವು ಸಂಪೂರ್ಣವಾಗಿ ನೆಲಕಚ್ಚಿದ್ದೇವೆ. ನಮ್ಮ ಕುಟುಂಬಕ್ಕೆ ನ್ಯಾಯ ಬೇಕು” ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ಗ್ರಾಮದಲ್ಲಿ ಸುಮಾರು 15 ದಿನಗಳ ಹಿಂದೆಯೂ ಇಂತಹದ್ದೇ ರೀತಿಯ ಘಟನೆ ನಡೆದಿದ್ದು, ಪಲ್ಸರ್ ಬೈಕ್‌ಗೆ ಬೆಂಕಿ ಹಚ್ಚಲಾಗಿತ್ತು ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.
ಘಟನೆಯ ಮಾಹಿತಿ ಪಡೆದ ಬೆಳ್ಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಘಟನೆಯಿಂದಾಗಿ ವಾಹನವನ್ನೇ ಬದುಕಿನಾಧಾರವಾಗಿಸಿಕೊಂಡಿದ್ದ ಕುಟುಂಬ ಇನ್ನೇನು ಮಾಡುವೆಂಬ ದುಃಖದಲ್ಲಿ ಮುಳುಗಿದೆ. ಕಿಡಿಗೇಡಿಗಳ ವಿರುದ್ಧ ತ್ವರಿತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂಬ ಆಗ್ರಹ ಸ್ಥಳೀಯರಿಂದ ಕೇಳಿಬರುತ್ತಿದೆ.