
ಬೆಂಗಳೂರು: ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಬಂಧನವಾಗಿದೆ. ಡೈರೆಕ್ಟೊರೇಟ್ ಆಫ್ ರೆವೆನ್ಯೂ ಇಂಟಲಿಜೆನ್ಸ್ (ಡಿಆರ್‌ಐ) ಅಧಿಕಾರಿಗಳು ಬಳ್ಳಾರಿಯಲ್ಲಿ ಚಿನ್ನದ ಅಂಗಡಿ ಮಾಲೀಕ ಸಾಹಿಲ್ ಜೈನ್ ಅನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿಂದೆ ನಟಿ ರನ್ಯಾ ರಾವ್ ಮತ್ತು ಆಕೆಯ ಮಾಜಿ ಪ್ರಿಯಕರ ತರುಣ್ ರಾಜ್‌ನ್ನು ಬಂಧಿಸಲಾಗಿತ್ತು.
ಸಾಹಿಲ್ ಜೈನ್ ಚಿನ್ನ ಕರಗಿಸುತ್ತಿದ್ದ ಮಾಹಿತಿ ಬಯಲು
ವಿಚಾರಣೆ ವೇಳೆ ರನ್ಯಾ ರಾವ್ ಮತ್ತು ತರುಣ್ ರಾಜ್ ನಿರಂತರ ಸಂಪರ್ಕದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಸಾಹಿಲ್ ಜೈನ್ ಎಂಬುದು ಹೊರಬಿದ್ದಿದೆ. ಚಿನ್ನದ ವ್ಯಾಪಾರ ನಡೆಸುತ್ತಿದ್ದ ಈತ, ಕಳ್ಳಸಾಗಣೆ ಮಾಡಲಾಗುತ್ತಿದ್ದ ಚಿನ್ನವನ್ನು ಕರಗಿಸಿ, ಆಪತ್ತಿಗೆ ಬಾರದಂತೆ ಮಾರಾಟ ಮಾಡುತ್ತಿದ್ದ. ಇದಕ್ಕಾಗಿ ಶೇ.10ರಿಂದ 15ರಷ್ಟು ಕಮಿಷನ್ ಪಡೆಯುತ್ತಿದ್ದನೆಂಬ ಮಾಹಿತಿ ಲಭ್ಯವಾಗಿದೆ.
ಡಿಆರ್‌ಐ ಅಧಿಕಾರಿಗಳು ಗುರುವಾರ ಬಳ್ಳಾರಿಯಲ್ಲಿ ಕಾರ್ಯಾಚರಣೆ ನಡೆಸಿ, ಸಾಹಿಲ್ ಜೈನ್‌ನ್ನು ಬಂಧಿಸಿದ್ದಾರೆ. ಇದೀಗ ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದು, ಆತನ ವಿರುದ್ಧ ಆಳವಾದ ತನಿಖೆ ನಡೆಸಲಾಗುತ್ತಿದೆ.
ಮುಂಬೈಯಿಂದ ಬಳ್ಳಾರಿಯ ತನಕದ ಸಂಪರ್ಕ ಜಾಲ
ಮೂಲತಃ ಬಟ್ಟೆ ವ್ಯಾಪಾರದಿಂದ ತನ್ನ ವೃತ್ತಿ ಆರಂಭಿಸಿದ್ದ ಸಾಹಿಲ್ ಜೈನ್ ಕುಟುಂಬ ಹಲವು ವರ್ಷಗಳವರೆಗೆ ಬಳ್ಳಾರಿಯಲ್ಲಿ ವಾಸವಿತ್ತು. ಆದರೆ, ಇತ್ತೀಚೆಗೆ ಅವರು ಬೆಂಗಳೂರಿಗೆ ಸ್ಥಳಾಂತರವಾದರೂ, ಸಾಹಿಲ್ ಮಾತ್ರ ಮುಂಬೈನಲ್ಲಿ ತನ್ನ ಸೋದರ ಮಾವನೊಂದಿಗೆ ವಾಸವಿದ್ದ.
ಈ ಹಿಂದೆ ಸಹ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಸಾಹಿಲ್ ಜೈನ್‌ನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದ ತಿಳಿದು ಬಂದಿದೆ. ಇದೀಗ, ನಟಿ ರನ್ಯಾ ರಾವ್ ಜತೆಗಿನ ಅವಿನಾಭಾವ ಸಂಬಂಧ ಮತ್ತು ಚಿನ್ನ ಕಳ್ಳಸಾಗಣೆಯಲ್ಲಿ ಅವನ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.
ತನಿಖೆ ಮುಂದುವರಿದಂತೆ ಮತ್ತಷ್ಟು ಬಂಧನ ಸಾಧ್ಯತೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಬಂಧನಗಳು ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರನ್ಯಾ ರಾವ್, ತರುಣ್ ರಾಜ್ ಹಾಗೂ ಸಾಹಿಲ್ ಜೈನ್ ನಡುವಿನ ಹಣಕಾಸು ಲೆನದು-ದೆನದು, ಚಿನ್ನದ ಸಾಗಣೆ ಮಾರ್ಗಗಳು ಮತ್ತು ಈ ಜಾಲದಲ್ಲಿ ಇನ್ನೂ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ಡಿಆರ್‌ಐ ನಡೆಸುತ್ತಿರುವ ಈ ಆಪರೇಷನ್‌ಗೆ ಸಿನಿಮಾ, ಉದ್ಯಮ ಹಾಗೂ ಸ್ಮಗ್ಲಿಂಗ್ ಜಾಲದ ನಡುವಿನ ಸಂಪರ್ಕದ ಕುರಿತ ಬಹುಮುಖ್ಯ ಅಂಶಗಳು ಹೊರಬರುತ್ತಿವೆ.