ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲೂಕಿನ ನಾಯನೇಗಲಿ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಸ್ಥೆ ತುಂಬಿ ತುಳುಕುತ್ತಿದೆ. ಈ ಗ್ರಾಮ ಪಂಚಾಯತಿಯಲ್ಲಿ ಮೂಲಭೂತ ಸೌಕರ್ಯಗಳು ಎಲ್ಲವೂ ಇವೆ. ಆದರೆ ಇಲ್ಲಿಯ ಪಿಡಿಒ ಎಮ್.ಕೆ. ಡೋಣಿ ನಿರ್ಲಕ್ಷದಿಂದ ಎಲ್ಲಾ ಸೌಕರ್ಯಗಳು ಇದ್ದು ಇಲ್ಲದಂತಾಗಿದೆ.
ಇದರಲ್ಲಿ ಮುಖ್ಯವಾಗಿ ಸ್ವಚ್ಛತೆ ಬಗ್ಗೆ ಅರಿವಿಲ್ಲದೇ ಕುರುಡನಾಗಿ ಕುಳಿತಿದ್ದಾನೆ ಎನ್ನಬಹುದು.
ತನ್ನ ಕಣ್ಮುಂದೆಯೇ ಸಾಕಷ್ಟು ಅವ್ಯವಸ್ಥೆ ಕಂಡರೂ ಸಹ ಕಾಣದಂತಿರುವ ಇಂತಹ ಅಧಿಕಾರಿಯನ್ನು ನೋಡಿ ಗ್ರಾಮಸ್ಥರು ಛೀಮಾರಿ ಹಾಕುತ್ತಿದ್ದಾರೆ. ಇದರಲ್ಲಿ ಮೊದಲನೆಯದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಸ ವಿಲೇವಾರಿ ವಾಹನವನ್ನು ಸರ್ಕಾರ ನೀಡಿದೆ. ಆದರೆ ಇದರ ಉಪಯೋಗ ಮಾತ್ರ ಹೊಸದಾಗಿ ಬಂದಾಗ ಮಾತ್ರ ಮಾಡಿ ಇದೀಗ ಆ ವಾಹನವನ್ನು ಮೂಲೆ ಗುಂಪು ಮಾಡಿದ್ದಾರೆ. ಈ ವಿಷಯದ ಕುರಿತು ಕರೆ ಮಾಡಿ ತಿಳಿಸಿದರು ಕ್ಯಾರೇ ಎನ್ನದ ಪಿಡಿಒನ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ.
ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಾಲ್ಕು ಹಳ್ಳಿಗಳಿದ್ದು, ಪ್ರತಿ ಹಳ್ಳಿಗಳಲ್ಲಿ ಚರಂಡಿಗಳ ವ್ಯವಸ್ಥೆ ಇಲ್ಲ, ಚರಂಡಿಗಳ ವ್ಯವಸ್ಥೆ ಇದ್ದಲ್ಲಿ ಸ್ವಚ್ಛತೆ ಮಾಡಲ್ಲವೆಂದು ಕೆಲವು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚರಂಡಿಗಳ ಹಾಗೂ ಗಲೀಜು ಪ್ರದೇಶದ ಸ್ವಚ್ಛತೆ ಸರಿಯಾಗಿ ಮಾಡದ ಕಾರಣ ಸೊಳ್ಳೆಗಳ ಕಾಟದಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಬಂದು 20ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣಗಳಿವೆ.
ಈ ರೀತಿಯಾಗಿ ಅಧಿಕಾರಿ ತೋರುವ ನಿರ್ಲಕ್ಷ್ಯದಿಂದ ಬಡ ಕುಟುಂಬಗಳೆಲ್ಲ ತಿಂಗಳು ಪೂರ್ತಿ ದುಡಿದ ಹಣವನ್ನೆಲ್ಲಾ ಆಸ್ಪತ್ರೆಗೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಸರಿಯಾದ ಸಮಯಕ್ಕೆ ಈ ಪಿಡಿಒ ಗ್ರಾಮ ಪಂಚಾಯಿತಿಗೆ ಬರುವುದಿಲ್ಲ ತನ್ನ ಮನಸ್ಸಿಗೆ ಬಂದಾಗ ಬರುತ್ತಾನೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿಯ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಸಹ ಅವ್ಯವಸ್ಥೆ ಮತ್ತು ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲ. ಹೊಸದಾಗಿ ಸದಸ್ಯರಾಗಿ ಆಯ್ಕೆಯಾದಾಗ ರೆಕ್ಕೆ ಬಿಚ್ಚಿ ಹಾರಾಡುವ ಹಕ್ಕಿಯಂತಿದ್ದ ಸದಸ್ಯರು ಇದೀಗ ರೆಕ್ಕೆ ಮುರಿದ ಹಕ್ಕಿಯಂತಾಗಿದ್ದಾರೆಂದು ಗ್ರಾಮಸ್ಥರು ಅಲ್ಲಲ್ಲಿ ಪಿಸುಗುಡುತ್ತಿದ್ದಾರೆ. ಹೊಸ ಹುರುಪಿನಲ್ಲಿ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಇದೀಗ ಎಲ್ಲಾ ಸದಸ್ಯರು ಮೌನವಾಗಿರುವುದು ಸಾಕಷ್ಟು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ. ಇವರೆಲ್ಲರೂ ಸಹ ಪಿಡಿಒ ರವರ ಬುದ್ದಿಯನ್ನೇ ಕಲಿಯುತ್ತಿದ್ದಾರಾ ಎಂಬುದು ಪ್ರಶ್ನೆಯಾಗಿದೆ?
ಇದಷ್ಟೇ ಅಲ್ಲದೇ ಇನ್ನೂ ಸಾಕಷ್ಟು ಅವ್ಯವಸ್ಥೆ ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದೆ. ಈ ವರದಿಯನ್ನು ಗಮನಿಸಿಯಾದರೂ ಎಲ್ಲವನ್ನೂ ಸರಿಪಡಿಸದಿದ್ದರೆ ಇನ್ನಷ್ಟು ಅವ್ಯವಸ್ಥೆ ಹಾಗೂ ಕಳಪೆ ಕಾಮಗಾರಿಗಳ ಕುರಿತು ಮುಂದಿನ ದಿನಗಳಲ್ಲಿ ಬಯಲಿಗೆ ಎಳೆಯಬೇಕಾಗುತ್ತದೆ.
ವರದಿ: ವಿಶ್ವನಾಥ ಭಜಂತ್ರಿ
1 thought on “ಸ್ವಚ್ಛತೆಗೆ ಆದ್ಯತೆ ನೀಡದ ಗ್ರಾಮ ಪಂಚಾಯತಿ ಪಿಡಿಒ; ಮೌನಾರಾದರಾ? ಗ್ರಾಮ ಪಂಚಾಯತಿ ಸದಸ್ಯರು”
Comments are closed.