ಮುಂಡಗೋಡ: ಸಬ್ ರಿಜಿಸ್ಟರ್ ಕಚೇರಿಯ ಸಿಬ್ಬಂದಿ ನೋಂದಣಿ ಮಾಡಲು ಸರಕಾರಿ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ಕೇಳುತ್ತಾರೆ ಎಂದು ಆರೋಪಿಸಿ ಸಾರ್ವಜನಿಕರು ಗುರುವಾರ ಕಚೇರಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕೊಳಗೇರಿ ನಿರ್ಮೂಲನಾ ಮಂಡಳಿಯಿಂದ ಪಟ್ಟಣದ ಕೊಳಗೇರಿ ನಿವಾಸಿಗಳಿಗೆ ಈ ಹಿಂದೆ ಅಧಿಕೃತ ಹಕ್ಕು ಪತ್ರವನ್ನು ಸಚಿವ ಶಿವರಾಂ ಹೆಬ್ಬಾರ್ ವಿತರಿಸಿ ಇದನ್ನು ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ನೋಂದಣಿ ಮಾಡಿಸಿಕೊಳ್ಳುವಾಗ ಯಾರಿಗೂ ಹಣವನ್ನು ನೀಡಬಾರದು ಎಂದು ಹೇಳಿದ್ದರು ಈ ಹಿನ್ನೆಲೆಯಲ್ಲಿ ಕಂಬಾರಗಟ್ಟಿಯ ನಿವಾಸಿಗಳು ನೋಂದಣಿ ಮಾಡಿಸಲು ಹೋದಾಗ ಸರಕಾರಿ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ಸಿಬ್ಬಂದಿಗಳು ಕೇಳಿದಾಗ ಆಕ್ರೋಶಗೊಂಡ ಕೆಲವು ಸಾರ್ವಜನಿಕರು ಸಬ್ ರಿಜಿಸ್ಟರ್ ಕಚೇರಿಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಂತರ ತಹಶೀಲ್ದಾರ್ ಕೊಠಡಿಗೆ ತೆರಳಿ ಸಬ್ ರೆಜಿಸ್ಟಾರ್ ಕಚೇರಿಯಲ್ಲಿ ಸರಕಾರಿ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ಕೇಳುತ್ತಿದ್ದಾರೆ ಹಣ ಕೊಡದಿದ್ದರೆ ಸರ್ವರ್ ಇಲ್ಲ,ಸಿಬ್ಬಂದಿ ಇಲ್ಲವೆಂಬ ನೆಪ ಹೇಳುತ್ತಿದ್ದಾರೆ ಅಲ್ಲದೆ ಕಚೇರಿಯಲ್ಲಿ ಸಿಸಿ ಕ್ಯಾಮರಾವನ್ನು ಸಹ ಅಳವಡಿಸಿಲ್ಲ ಎಂದು ಮನವಿ ಪತ್ರದಲ್ಲಿ ವಿನಂತಿಸಿ ಕೂಡಲೇ ಕಛೇರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆಯೂ ಸಹ ವಿನಂತಿಸಿದ್ದಾರೆ.
ವರದಿ: ಮಂಜುನಾಥ ಹರಿಜನ.