ಮುಂಡಗೋಡ: ಪಟ್ಟಣದ ತಾಲೂಕು ಆಸ್ಪತ್ರೆಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಶುಕ್ರವಾರ ಸಂಜೆ ಭೇಟಿ ನೀಡಿ ವೈದ್ಯರು ಮತ್ತು ಸಿಬ್ಬಂದಿಗಳಿಗೆ ತರಾಟೆಯನ್ನು ತೆಗೆದುಕೊಂಡ ಘಟನೆ ನಡೆದಿದೆ.
ಮಳಗಿಯ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಿಕ್ನಿಕ್ ಗೆ ತೆರಳಿ ಬರುತ್ತಿದ್ದ ವೇಳೆ ಟ್ರ್ಯಾಕ್ಟರ್ ಪಲ್ಟಿಯಾಗಿ ಗಾಯಗೊಂಡಿದ್ದ ಕೆಲವು ವಿದ್ಯಾರ್ಥಿನಿಯರನ್ನು ತಾಲೂಕ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಘಟನೆಯ ಮಾಹಿತಿ ತಿಳಿದ ಸಚಿವ ಹೆಬ್ಬಾರ್ ಅವರು ಗಾಯಾಳುಗಳನ್ನು ಮಾತನಾಡಿಸಲು ಆಸ್ಪತ್ರೆಗೆ ಬಂದಿದ್ದಾಗ ವೈದ್ಯರು ಹಾಗೂ ಸಿಬ್ಬಂದಿಗಳು ಆಸ್ಪತ್ರೆಯಲ್ಲಿ ಇರಲಿಲ್ಲ ಇದರಿಂದ ಅಸಮಾಧಾನಗೊಂಡ ಸಚಿವರು ನಂತರ ಬಂದ ವೈದ್ಯರು ಮತ್ತು ಸಿಬ್ಬಂದಿಗಳಿಗೆ ತರಾಟೆ ತೆಗೆದುಕೊಂಡರು.
ಆಸ್ಪತ್ರೆಗೆ ದಾಖಲಾಗಿದ್ದ ಕೆಲವು ವಿದ್ಯಾರ್ಥಿನಿಯರನ್ನು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದಾಗ ಮತ್ತಷ್ಟು ಕೋಪಗೊಂಡ ಸಚಿವರು ಇಷ್ಟು ಬೇಗ ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸುವ ಅಗತ್ಯವೆನಿತ್ತು?ಆ ವಿದ್ಯಾರ್ಥಿನಿಯರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿಕೊಂಡು ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದರು..
ಶನಿವಾರದಂದು ಮೃತ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ, ಆಕೆಯ ತಂದೆ ತಾಯಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಗುವುದು, ಇದರಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಲಿದೆ ಮತ್ತು ಶಿರಸಿಯ ಟಿಎಸ್ಎಸ್ ಆಸ್ಪತ್ರೆಗೂ ಸಹ ಭೇಟಿ ನೀಡಲಾಗುವುದು ಎಂದು ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು.
ವರದಿ:ಮಂಜುನಾಥ ಹರಿಜನ.