ಗೋವುಗಳು ದೇವರು ಹಾಗೂ ಕಾಮಧೇನು ಎಂಬ ನಂಬಿಕೆ ಹಾಗೂ ವಿಶ್ವಾಸ ಇದೆ. ಅದನ್ನು ಕಾಪಾಡುವ ಹಾಗೂ ಗೌರವಿಸುವ ಅಗತ್ಯವಿದೆ. ಹಾಗಾಗಿ ಅವುಗಳ ಹತ್ಯೆಯನ್ನು ತಡೆಯಲು ಕೇಂದ್ರ ಸರ್ಕಾರವು ಗೋಹತ್ಯೆ ನಿಷೇಧಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಮತ್ತು ಅವುಗಳನ್ನು ‘ಸಂರಕ್ಷಿತ ರಾಷ್ಟ್ರೀಯ ಪ್ರಾಣಿ’ ಎಂದು ಘೋಷಣೆ ಮಾಡಲಿದೆ ಅಲಹಾಬಾದ್ ಹೈಕೋರ್ಟ್ ಭರವಸೆ ವ್ಯಕ್ತಪಡಿಸಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶಮೀಮ್ ಅಹ್ಮದ್ ಅವರ ನ್ಯಾಯಪೀಠವು, ಜಾತ್ಯತೀತ ದೇಶವಾಗಿರುವ ಭಾರತದಲ್ಲಿ ಎಲ್ಲ ಧರ್ಮಗಳಿಗೂ ಗೌರವ ನೀಡುತ್ತೇವೆ. ವೇದ ಕಾಲದಿಂದಲೂ ಗೋವುಗಳ ಆರಾಧನೆಯನ್ನು ಕಾಣಬಹುದು. ಗೋವುಗಳನ್ನು ಕೊಲ್ಲುವವರು ಅಥವಾ ಗೋವುಗಳನ್ನು ಕೊಲ್ಲಲು ಬೇರೆಯವರಿಗೆ ಅವಕಾಶ ನೀಡುವವರು, ಅವರ ದೇಹದ ಮೇಲೆ ಕೂದಲು ಇರುವಷ್ಟು ಕಾಲದ ವರೆಗೆ ನರಕದಲ್ಲಿ ಕೊಳೆಯಲು ಅರ್ಹರು ಎಂದು ಪೀಠ ಕಿಡಿಕಾರಿದೆ.
ಗೋಹತ್ಯೆ ಮತ್ತು ಗೋಸಾಗಾಣಿಕೆ ಮಾಡಿದ ಆರೋಪ ಎದುರಿಸುತ್ತಿರುವ ಉತ್ತರ ಪ್ರದೇಶದ ಮೊಹಮ್ಮದ್ ಅಬ್ದುಲ್ ಖಾಲಿಕ್ ತನ್ನ ವಿರುದ್ಧ ಅಪರಾಧ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿರುವ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶಮೀಮ್ ಅಹ್ಮದ್ ಅವರ ನ್ಯಾಯಪೀಠವು, ಗೋವು ತಾಯಿ ಸಮಾನ, ಭಗವಾನ್ ಶ್ರೀ ಕೃಷ್ಣನು ಕೂಡ ಗೋವಿನ ಪಾದಗಳಿಂದ ಜ್ಞಾನ ಪಡೆದಿದ್ದಾನೆ. ಹಿಂದೂಗಳು ಶತಮಾನದಿಂದ ಗೋವನ್ನು ಪೂಜಿಸುತ್ತಿದ್ದಾರೆ. ಹಿಂದೂಯೇತರ, ಮೊಘಲರ ಕಾಲದಲ್ಲಿಯೂ ಹಿಂದೂ ಭಾವನೆಗಳನ್ನು ಗೌರವಿಸಿ, ಗೋ ಹತ್ಯೆಯನ್ನು ಬಲವಾಗಿ ವಿರೋಧಿಸಲಾಗಿತ್ತು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಹಿಂದೂಗಳ ನಂಬಿಕೆಯ ಬಗ್ಗೆಯೂ ಉಲ್ಲೇಖ ಮಾಡಿದ ನ್ಯಾಯಾಲಯ, ಶುದ್ಧೀಕರಿಸುವಿಕೆ ಮತ್ತು ಪಂಚಗವ್ಯದ (ಹಾಲು, ಮೊಸರು, ಬೆಣ್ಣೆ, ಗೋಮೂತ್ರ ಮತ್ತು ಸಗಣಿ) ಬಳಕೆಯಲ್ಲಿ ಗೋವು ಮಹತ್ವದ ಪಾತ್ರ ವಹಿಸುತ್ತವೆ. ಈ ಕಾರಣದಿಂದ ಅವುಗಳಿಗೆ ಪೂಜನೀಯ ಸ್ಥಾನವಿದೆ. ಬ್ರಹ್ಮನು ಪುರೋಹಿತರು ಮತ್ತು ಗೋವುಗಳನ್ನು ಏಕಕಾಲದಲ್ಲಿ ಸೃಷ್ಟಿಸಿದ. ಪುರೋಹಿತರು ಧಾರ್ಮಿಕ ಶ್ಲೋಕಗಳನ್ನು ಉಚ್ಚರಿಸಿದರೆ, ಗೋವುಗಳು ಆ ಆಚರಣೆಗೆ ಅಗತ್ಯವಾದ ತುಪ್ಪ ನೀಡಲಿ ಎನ್ನುವುದು ಅದರ ಆಶಯ ಎಂದು ಕೋರ್ಟ್ ಹೇಳಿದೆ.
ಮುಂದುವರಿದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಶಮೀಮ್ ಅಹ್ಮದ್ ಅವರ ನ್ಯಾಯಪೀಠ, ಗೋವು ಇನ್ನೂ ಅನೇಕ ದೇವರ ಜತೆಗೂ ಗುರುತಿಸಿಕೊಂಡಿದೆ. ಈಶ್ವರನ ಜತೆ ನಂದಿ, ಇಂದ್ರ ದೇವನ ಜತೆ ಕಾಮಧೇನು ಇದ್ದರೆ, ಶ್ರೀ ಕೃಷ್ಣ ಸ್ವತಃ ಗೋಪಾಲಕನಾಗಿದ್ದ. ಇನ್ನೂ ಅನೇಕ ದೇವತೆಯರ ಜತೆಗೂ ಗೋವುಗಳನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಗೋವು ಅತ್ಯಂತ ಪವಿತ್ರ ಪ್ರಾಣಿ. ಇದು ಕಾಮಧೇನು ಅಥವಾ ಪೂಜನೀಯ ಹಸು, ಎಲ್ಲ ಕೋರಿಕೆಗಳನ್ನೂ ಈಡೇರಿಸುವ ದೇವರು ಎಂದು ಪರಿಗಣಿಸಲಾಗಿದೆ” ಎಂದು ಹೇಳಿದೆ.
ಸಮುದ್ರಮಂಥನದ ಸಮಯದಲ್ಲಿ ಕ್ಷೀರಸಾಗರದಿಂದ ಗೋವುಗಳು ಸೃಷ್ಟಿಯಾದವು. ಗೋಮಾತೆಯ ನಾಲ್ಕು ಕಾಲುಗಳು ವೇದಗಳನ್ನು, ಕೆಚ್ಚಲುಗಳು ನಾಲ್ಕು ಪುರುಷಾರ್ಥಗಳನ್ನು ಸಂಕೇತಿಸುತ್ತವೆ. ಅದರ ಕೊಂಬುಗಳು ದೇವರ ಸ್ವರೂಪ. ಆಕೆಯ ಮುಖ ಸೂರ್ಯ ಮತ್ತು ಚಂದ್ರ. ಆಕೆಯ ಭುಜ ಅಗ್ನಿ ದೇವತೆಯ ಪ್ರತಿರೂಪ. ಆಕೆಯನ್ನು ನಂದಾ, ಸುನಂದಾ, ಸುರಭಿ, ಸುಶೀಲಾ ಮತ್ತು ಸುಮನಾ ಎಂಬ ರೂಪಗಳಲ್ಲಿಯೂ ವರ್ಣಿಸಲಾಗಿದೆ ಎಂದು ಕೋರ್ಟ್ ಹೇಳಿದೆ.