
ದಾವಣಗೆರೆ: ಹರಿಹರ ಪಟ್ಟಣದ ವಿದ್ಯಾನಗರದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಊರಿಗೆ ತೆರಳಿದ್ದ ಪೊಲೀಸರ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯನಾಯ್ಕ ಅವರ ನಿವಾಸವಿದು.
ಮಾರ್ಚ್ 29ರಂದು ಕುಟುಂಬದೊಂದಿಗೆ ಯುಗಾದಿ ಆಚರಿಸಲು ಊರಿಗೆ ತೆರಳಿದ್ದ ಜಯನಾಯ್ಕ ಅವರು, ರಾತ್ರಿ ಪಾಳಿ ಕರ್ತವ್ಯದ ನಿಮಿತ್ತ ಮರಳಿ ಬಂದು ಮನೆಗೆ ಬೀಗ ಹಾಕಿ ತೆರಳಿದ್ದರು. 9.30ರ ಹೊತ್ತಿಗೆ ಮನೆಗೆ ಹಿಂದಿರುಗಿದಾಗ ಗೇಟ್ ಮತ್ತು ಬಾಗಿಲಿನ ಇಂಟರ್ ಲಾಕ್ ಮುರಿದು ಹಾಕಿರುವುದು ಗಮನಕ್ಕೆ ಬಂತು. ತಕ್ಷಣಕ್ಕೆ ಒಳಗೆ ಪರಿಶೀಲಿಸಿದಾಗ ಸುಮಾರು 60.5 ಗ್ರಾಂ ತೂಕದ ಚಿನ್ನಾಭರಣಗಳು – ಚೈನ್ ಸರ, ಉಂಗುರ, ಬ್ರಾಸ್ ಲೇಟು, ಕಿವಿಓಲೆಗಳು ಹಾಗೂ ರೂ. 50,000 ನಗದು ಕಳ್ಳತನಗೊಂಡಿರುವುದು ಗೊತ್ತಾಗಿದೆ.
ಒಟ್ಟು ರೂ. 5.3 ಲಕ್ಷ ಮೌಲ್ಯದ ಆಸ್ತಿ ಕಳ್ಳತನಗೊಂಡಿದ್ದು, ಈ ಸಂಬಂಧ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಕಳ್ಳರ ಪತ್ತೆಗಾಗಿ ಸಿಸಿಟಿವಿ ಫುಟೇಜ್‌ಗಳ ಪರಿಶೀಲನೆ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ಹಬ್ಬದ ಸಂದರ್ಭದಲ್ಲಿ ಖಾಲಿ ಮನೆಗಳನ್ನು ಗುರಿಯಾಗಿಸುವ ಕಳ್ಳರ ಚಟುವಟಿಕೆ ಮತ್ತೊಮ್ಮೆ ಮರುಕಳಿಸಿರುವ ಈ ಘಟನೆ, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.