
ಕಾರವಾರ : 2025ರ ಫೆಬ್ರವರಿ ಹಾಗೂ ಮಾರ್ಚ ತಿಂಗಳ ಅಕ್ಕಿಯನ್ನು ಸರ್ಕಾರ ಒಟ್ಟಿಗೆ ಕೊಡಲು ನಿರ್ಧರಿಸಿದ್ದು, ಪಡಿತರ ಅಂಗಡಿಯಲ್ಲಿ ಅಕ್ಕಿ ಕೊಡದೇ ಇದ್ದರೆ 1967ಗೆ ಫೋನ್ ಮಾಡಿ’ ಎಂದು ಉತ್ತರ ಕನ್ನಡ ಜಿಲ್ಲಾಡಳಿತ ಹೇಳಿದೆ. ಪಡಿತರ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾದರೂ ದೂರು ನೀಡುವಂತೆ ಫಲಾನುಭವಿಗಳಿಗೆ ಸೂಚಿಸಲಾಗಿದೆ.
ಗಡಿಭಾಗದಲ್ಲಿ ಅಕ್ಕಿ ಅನಧಿಕೃತ ಸಾಗಾಟ, ಅಕ್ರಮ ಮಾರಾಟ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆಯೂ ಗಮನಹರಿಸಿ’ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. `ಪಡಿತರ ಚೀಟಿದಾರರಿಗೆ ವಿತರಿಸಿದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಅನಧಿಕೃತವಾಗಿ ದಾಸ್ತಾನು-ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು’ ಎಂದು ಅವರು ಆದೇಶಿಸಿದರು.
ಅಕ್ಕಿ ವಿತರಣೆ ಕುರಿತಂತೆ ಪಡಿತರ ಅಂಗಡಿಗಳಲ್ಲಿ ಪ್ರತಿ ದಿನದ ವಿತರಣೆಯ ವಿವರ ಮತ್ತು ದಾಸ್ತಾನು ವಿವರಗಳನ್ನು ಪರಿಶೀಲಿಸಬೇಕು. ಪಡಿತರ ವಿತರಣೆಯ ತತ್ರಾಂಶ ಕಾರ್ಯನಿರ್ವಹಣೆಗೆ ಇಂರ್ಟನೆಟ್ ಸಮಸ್ಯೆಯಿದಲ್ಲಿ ಬಿ ಎಸ್ ಎನ್ ಎಲ್ ಮೂಲಕ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಗಡಿಬಾಗದಲ್ಲಿ ಅನಧಿಕೃವಾಗಿ ಅಕ್ಕಿಯ ಮಾರಾಟ ಮತ್ತು ಸಾಗಾಟದ ಬಗ್ಗೆ ನಿಗಾ ವಹಿಸಬೇಕು’ ಎಂದವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಡಿತರ ಚೀಟಿಯ ಕೆವೈಸಿಯಲ್ಲಿ ಶೇ 97ರಷ್ಟು ಪ್ರಗತಿಯಾಗಿದ್ದು, ಮಾರ್ಚ್ ತಿಂಗಳ ಕೊನೆಯವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಇ-ಕೆವೈಸಿ ಮಾಡುವ ಕಾರ್ಯ ನಡೆಯಲಿದೆ. ಪಡಿತರ ಚೀಟಿದಾರರು ಯಾವುದೇ ಶುಲ್ಕ ನೀಡದೇ ಕೆವೈಸಿ ಮಾಡಿಸಿಕೊಳ್ಳಬೇಕು. ಪಡಿತರ ಚೀಟಿದಾರರು ತಮ್ಮ ಬಯೋ ಮೆಟ್ರಿಕ್ ನೀಡಿದ ತಕ್ಷಣವೇ ಪಡಿತರ ಪಡೆಯಬೇಕು’ ಎಂದವರು ಕರೆ ನೀಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣ್‌ಕರ್ ಹಾಗೂ ವಿವಿಧ ತಾಲೂಕಿನ ಆಹಾರ ನಿರೀಕ್ಷಕರು ಸಭೆಯಲ್ಲಿದ್ದರು.