ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದ ಆವರಣದಲ್ಲಿದ್ದ ಮರ ಅಕ್ರಮ ಸಾಗಾಟವಾಗಿದ್ದು ಕಚೇರಿ ಕಾರ್ಯದರ್ಶಿಯವರಿಗೂ ಮಾಹಿತಿ ಇಲ್ಲದೆ ಮರ ಸಾಗಾಟವಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸರಕಾರಿ ಸಂಸ್ಥೆಗೆ ಸೇರಿದ ಜಮೀನಿನ ಮರವನ್ನು ಕಾನೂನುಬಾಹಿರವಾಗಿ ಹರಾಜು ಮಾಡದೆ ಇರುವುದಲ್ಲದೆ ಸರಕಾರಿ ಖಾತೆಗೆ ಹಣ ಜಮೆ ಮಾಡದೆ ಸಾಗಾಟ ಮಾಡಿರುವುದು ಅಕ್ರಮದ ರೂವಾರಿಗಳು ಕಚೇರಿಯಲ್ಲೇ ಇದ್ದಾರೆಂಬ ಸಂಶಯವನ್ನು ಧೃಡಗೊಳಿಸಿದೆ. ಇದೀಗ ಮರ ಗಾಳಿಗೆ ಉರುಳಿತ್ತೆಂದು ಕಾರ್ಯದರ್ಶಿಯವರನ್ನೇ ಯಾಮಾರಿಸಲು ಕಚೇರಿ ಸಿಬ್ಬಂದಿಗಳು ಪ್ರಯತ್ನಿಸುತ್ತಿರುವ ವಿಚಾರವೂ ಬೆಳಕಿಗೆ ಬಂದಿದೆ.ಮರ ಸಾಗಾಟವಾಗಿರುವ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗಳು ವಿಫಲವಾಗಿರುವುದು ಅಕ್ರಮದ ಬಗ್ಗೆ ಸಂಶಯ ಇನ್ನಷ್ಟು ಬಲಗೊಳ್ಳುವಂತೆ ಮಾಡಿದೆ.