ಹಂಪಿ ಮತ್ತು ಆನೆಗೊಂದಿ ಪ್ರದೇಶದಲ್ಲಿ ವಿದೇಶಿ ಪ್ರವಾಸಿಗರ ಮೇಲೆ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದ ಬಳಿಕ, ಈ ಪ್ರದೇಶದ ಪ್ರವಾಸೋದ್ಯಮ ತೀವ್ರ ಹಿನ್ನಡೆಯನ್ನು ಅನುಭವಿಸುತ್ತಿದೆ. ಘಟನೆಯ ನಂತರ ಹೊಟೇಲ್ ಮತ್ತು ರೆಸಾರ್ಟ್‌ಗಳ ಮೇಲೆ ಪೊಲೀಸರ ಓಡಾಟ ಹೆಚ್ಚಿರುವ ಕಾರಣ ಪ್ರವಾಸಿಗರು ಭಯಗೊಂಡು ತಾವು ಬಾಡಿಗೆಗೆ ಪಡೆದ ರೂಮ್‌ಗಳನ್ನು ಖಾಲಿ ಮಾಡುತ್ತಿದ್ದಾರೆ.

ಆನ್‌ಲೈನ್‌ ಮೂಲಕ ರೂಮ್‌ ಬುಕ್ ಮಾಡಿದ್ದ ಹಲವರು ರದ್ದುಪಡಿಸಿ, ಮುಂಗಡ ಹಣವನ್ನು ವಾಪಸ್ ಪಡೆದುಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಹಂಪಿ ಮತ್ತು ಆನೆಗೊಂದಿ ಭಾಗಕ್ಕೆ ನವೆಂಬರ್‌ನಿಂದ ಏಪ್ರಿಲ್‌ವರೆಗೆ ಪ್ರವಾಸಿಗರ ಪ್ರವಾಹವೇ ಇರುತ್ತದೆ. ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಅವರು ಈ ಭಾಗಕ್ಕೆ ಆಗಮಿಸುತ್ತಾರೆ. ಆದರೆ ಈ ಬಾರಿಯ ದುರ್ಘಟನೆ ಕಾರಣದಿಂದ ಹೋಳಿ ಹಬ್ಬದ ಸಂಭ್ರಮ ಮಸುಕಾಗಿದೆ. ಮಾ. 13 ಮತ್ತು 14ರಂದು ನಡೆಯಲಿರುವ ಹಬ್ಬಕ್ಕೆ ಪೊಲೀಸ್‌ ಇಲಾಖೆ ಪರವಾನಗಿ ನೀಡುವ ಸಾಧ್ಯತೆ ಕುರಿತು ಅನುಮಾನ ವ್ಯಕ್ತವಾಗಿದೆ.

ಹಲ್ಲೆ ಮತ್ತು ದೌರ್ಜನ್ಯ ಪ್ರಕರಣ: 3ನೇ ಆರೋಪಿ ಬಂಧನ

ವಿದೇಶಿ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಗಾವತಿ ತಾಲೂಕಿನ ಸಣಾಪುರ ಕೆರೆಯ ಬಳಿ ನಡೆದ ಘಟನೆಯಲ್ಲಿ ತೋಡಿಕೊಂಡ 3ನೇ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಶರಣಬಸವರಾಜ ಸಾಯಿನಗರ ಎಂದು ಗುರುತಿಸಲಾಗಿದ್ದು, ಚೆನ್ನೈ ರೈಲ್ವೇ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಎಸ್ಪಿ ಡಾ. ರಾಮ್ ಅರಸಿದ್ಧಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಈ ಮೊದಲು ಮಲ್ಲೇಶ ದಾಸರ್ ಮತ್ತು ಚೇತನ್ ಸಾಯಿ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳು ನಿಸರ್ಗ ವೀಕ್ಷಣೆಗೆ ತೆರಳಿದ್ದ ವಿದೇಶಿ ಪ್ರವಾಸಿಗರಿಂದ ಹಣ ಕೇಳಿದಾಗ, ಅವರಿಗೆ 100 ರೂಪಾಯಿಗೆ ಬದಲಾಗಿ 20 ರೂಪಾಯಿ ನೀಡಲಾಗಿತ್ತು. ಇದರಿಂದ ಕೋಪಗೊಂಡ ಆರೋಪಿಗಳು ವಿದೇಶಿ ಮಹಿಳೆ ಸೇರಿದಂತೆ ಇತರರ ಮೇಲೆ ಹಲ್ಲೆ ನಡೆಸಿ, ಮೂವರು ಪುರುಷರನ್ನು ನಾಲೆಗೆ ತಳ್ಳಿದ್ದರು. ಬಳಿಕ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಹಂಪಿ ಪ್ರವಾಸೋದ್ಯಮದ ಭದ್ರತೆ ಕುರಿತು ಗಂಭೀರ ಪ್ರಶ್ನೆ ಎದ್ದಿದೆ, ಪ್ರವಾಸಿಗರ ಭದ್ರತೆಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬ ಕೂಗು ಕೇಳಿಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!