ಮುಂಡಗೋಡ: ಕಳೆದ 15 ದಿನಗಳಿಂದ ಕಾಡ್ಗಿಚ್ಚು ಅತೀ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಇದರಿಂದ ಅಪಾರ ಪ್ರಮಾಣದ ಬೆಲೆಬಾಳುವ ಅರಣ್ಯ ನಾಶವಾಗುವುದರ ಜೊತೆಗೆ ಅರಣ್ಯದಲ್ಲಿ ವಾಸಿಸುವ ಜೀವ ಸಂಕುಲಗಳು ತಮ್ಮ ಪ್ರಾಣ ರಕ್ಷಣೆಗೆ ಪರದಾಡುವ ಪರಿಸ್ಥಿತಿ ಬಂದೊದಗಿದೆ.
ತಾಲೂಕಿನಲ್ಲಿ ಎರಡು ವಲಯಗಳಿದ್ದು ಮುಂಡಗೋಡ ಹಾಗೂ ಕಾತೂರು ವಲಯಗಳಾಗಿ ವಿಂಗಡಣೆಗೊಂಡಿದ್ದು ಈ ಎರಡು ವಲಯಗಳ ಗುಂಜಾವತಿ,ಕ್ಯಾತ್ಳಳ್ಳಿ, ಕಾತೂರು, ಬೆಡ್ಸಗಾಂವ್, ಸಾಲಗಾಂವ್,ಚಿಗಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಇತ್ತೀಚಿಗೆ ಅರಣ್ಯಕ್ಕೆ ಬೆಂಕಿ ಬೀಳುವ ಪ್ರಕರಣಗಳು ಹೆಚ್ಚುತ್ತಿವೆ. ಪ್ರಖರವಾದ ಬಿಸಿಲು ಮತ್ತು ಜೋರಾಗಿ ಬೀಸುತ್ತಿರುವ ಗಾಳಿಯಿಂದ ಬೆಂಕಿ ಬಹಳ ವೇಗವಾಗಿ ಹರಡುತ್ತಿದೆ ಇದರಿಂದ ಅಪಾರ ಪ್ರಮಾಣದ ಬೆಲೆಬಾಳುವ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗುತ್ತಿದೆ.
ಬೇಸಿಗೆ ಕಾಲದಲ್ಲಿ ಒಣಗಿ ನೆಲಕ್ಕೆ ಬಿದ್ದ ಎಲೆಗಳಿಗೆ ಬೆಂಕಿ ಹಚ್ಚಿ ಸುಟ್ಟರೆ ಮಳೆಗಾಲದಲ್ಲಿ ಹುಲ್ಲು ಚೆನ್ನಾಗಿ ಬೆಳೆಯುತ್ತದೆ ಇದರಿಂದ ದನ ಕರುಗಳನ್ನು ಮೇಯಿಸಲು ಅನುಕೂಲಕರ ಎನ್ನುವ ದೃಷ್ಟಿಯಲ್ಲಿ ಕೆಲವು ಕಿಡಿಗೇಡಿಗಳು ಇಂತಹ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ.
ಮುನ್ನೆಚ್ಚರಿಕೆಯ ಜೊತೆ ಸಾರ್ವಜನಿಕ ತಿಳುವಳಿಕೆಯ ಅಗತ್ಯವಿದೆ: ಅರಣ್ಯಕ್ಕೆ ಬೆಂಕಿ ಹಾಕುವುದರಿಂದ ಆಗುವ ತೊಂದರೆಗಳು ಹಾಗೂ ಅದರಿಂದ ಅರಣ್ಯದಲ್ಲಿರುವ ಪ್ರಾಣಿ ಮತ್ತು ಸಸ್ಯ ಸಂಕುಲಗಳಿಗಾಗುವ ತೊಂದರೆಗಳ ಬಗ್ಗೆ ಅರಣ್ಯ ಇಲಾಖೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಜೊತೆಗೆ ಅರಣ್ಯಕ್ಕೆ ಬೆಂಕಿ ಬೀಳದಂತೆ ತಡೆಯುವ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.
ಏನೇ ಆಗಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಈ ರೀತಿ ಅರಣ್ಯವನ್ನು ಸುಟ್ಟು ಹಾಳು ಮಾಡುವ ದುಷ್ಕೃತ್ಯವನ್ನು ಬಿಡಬೇಕಾಗಿದೆ.
ವರದಿ:ಮಂಜುನಾಥ ಹರಿಜನ.