ಗುರುವಾರ (ಮಾರ್ಚ್ 7) ರಾತ್ರಿ 11 ರಿಂದ 11:30ರ ನಡುವೆಯೇ ಭಯಾನಕ ಘಟನೆ ನಡೆದಿದೆ. 27 ವರ್ಷದ ಇಸ್ರೇಲಿ ಯುವತಿ ಹಾಗೂ 29 ವರ್ಷದ ಹೋಮ್‌ಸ್ಟೇ ಮಾಲಕಿಯ ಮೇಲೆ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಜತೆಗಿದ್ದ ಮೂವರು ಪುರುಷರ ಮೇಲೆ ಹಲ್ಲೆ ನಡೆಸಲಾಗಿದೆ. ಈ ದಾಳಿಯಲ್ಲಿ ಒಡಿಶಾದ ಪ್ರವಾಸಿಗನೊಬ್ಬ ಕೊಲೆಯಾಗಿದ್ದು, ಅವರ ಮೃತದೇಹ ತುಂಗಭದ್ರಾ ನದಿಯ ಕಾಲುವೆಯಲ್ಲಿ ಪತ್ತೆಯಾಗಿದೆ. ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ

ಹಂಪಿಯಿಂದ 4 ಕಿಮೀ ದೂರದ ಸಣಾಪುರ ಹಿನ್ನೀರಿನ ಬಳಿ ಈ ಘಟನೆಯು ನಡೆದಿದೆ. ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಬಂದಿದ್ದ ಇಸ್ರೇಲಿ ಮಹಿಳೆ, ಅಮೆರಿಕದ ಡೇನಿಯಲ್, ಮಹಾರಾಷ್ಟ್ರದ ಪಂಕಜ್, ಒಡಿಶಾದ ಪ್ರವಾಸಿಗ ಹಾಗೂ ಹೋಮ್‌ಸ್ಟೇ ಮಾಲಕಿ ರಾತ್ರಿ ಆಕಾಶದ ನಕ್ಷತ್ರಗಳನ್ನು ವೀಕ್ಷಿಸಲು ಹೊರಗೆ ಬಂದಿದ್ದರು.

ಈ ಸಮಯದಲ್ಲಿ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮೊದಲು ಪೆಟ್ರೋಲ್ ಪಂಪ್ ಎಲ್ಲಿ ಇದೆ ಎಂದು ಕೇಳುವ ನೆಪ ಮಾಡಿಕೊಂಡರು. ಹೋಮ್‌ಸ್ಟೇ ಮಾಲಕಿ ದಾರಿ ಗೊತ್ತಿಲ್ಲ ಎಂದು ಹೇಳುತ್ತಿದ್ದಂತೆ, ದುಷ್ಕರ್ಮಿಗಳು ಹಣ ಕೊಡಲು ಒತ್ತಾಯಿಸಿದರು. ಮೊದಲು 20 ರೂಪಾಯಿ ನೀಡಿದರೂ, ಅವರು 100 ರೂಪಾಯಿಗಾಗಿ ಬಲವಂತ ಮಾಡಿದರು. ಇದಾದ ಬಳಿಕ ಹಠಾತ್ತನೆ ಪುರುಷರ ಮೇಲೆ ಹಲ್ಲೆ ನಡೆಸಿ, ಅವರನ್ನು ಸಮೀಪದ ಕಾಲುವೆಗೆ ತಳ್ಳಿದರು.

ಈ ವೇಳೆ ದುಷ್ಕರ್ಮಿಗಳಲ್ಲಿ ಇಬ್ಬರು ಇಸ್ರೇಲಿ ಯುವತಿ ಹಾಗೂ ಹೋಮ್‌ಸ್ಟೇ ಮಾಲಕಿಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಪರಾರಿಯಾದರು. ಕಾಲುವೆಗೆ ತಳ್ಳಲಾದ ಪಂಕಜ್ ಮತ್ತು ಡೇನಿಯಲ್ ಈಜಿಕೊಂಡು ಮೇಲಕ್ಕೆ ಬಂದು ಸ್ಥಳೀಯರಿಗೆ ವಿಷಯ ತಿಳಿಸಿದರು. ಆದರೆ, ಒಡಿಶಾದ ಪ್ರವಾಸಿಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಪೊಲೀಸ್ ತನಿಖೆ ಮುಂದುವರಿದಿದೆ

ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಹಂಪಿ ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ, ಡಾಗ್‌ ಸ್ಕ್ವಾಡ್ ಸೇರಿ ಈ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ.

ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅನ್ವಯ ಹಲವು ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇವುಗಳಲ್ಲಿ:

  • ಸೆಕ್ಷನ್ 309 (6) – ಸುಲಿಗೆ ಕಳ್ಳತನ
  • ಸೆಕ್ಷನ್ 311 – ಸಾವಿಗೆ ಅಥವಾ ಗಂಭೀರ ಗಾಯಕ್ಕೆ ಕಾರಣವಾಗುವ ಉದ್ದೇಶದಿಂದ ದರೋಡೆ
  • ಸೆಕ್ಷನ್ 70 (1) – ಸಾಮೂಹಿಕ ಅತ್ಯಾಚಾರ
  • ಸೆಕ್ಷನ್ 109 – ಕೊಲೆ ಯತ್ನ

ದುಷ್ಕರ್ಮಿಗಳು ಸ್ಥಳೀಯರಾಗಿರುವ ಸಾಧ್ಯತೆ ಇದ್ದು, ಪೊಲೀಸರು ಅವರ ಪತ್ತೆಗೆ ವಿಶೇಷ ತಂಡ ರಚಿಸಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!