ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲೂಕಿನ ನಾಯನೇಗಲಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ತೀರಾ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ.
ರಸ್ತೆ ಬದಿಯಲ್ಲಿ ಅಗೆದು ಪೈಪುಗಳನ್ನು ಹಾಕಿದ್ದಾರೆ ಆದರೆ ಅಗೆದ ನೆಲವನ್ನು ಸರಿಯಾಗಿ ಮುಚ್ಚದೆ ಕಾಟಾಚಾರಕ್ಕೆ ಮುಚ್ಚಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ. ಸಾಕಷ್ಟು ವಾಹನಗಳು ಇದರಲ್ಲಿ ಸಿಲುಕಿಕೊಂಡು ಒದ್ದಾಡಿವೆ. ಅಷ್ಟೇ ಅಲ್ಲದೆ ಲಾರಿ ಸಿಲುಕಿ ಈ ಮುಂಚೆ ಹಾಕಿರುವ ಪೈಪುಗಳು ಕೂಡ ಒಡೆದು ಹೋಗಿ ನೀರು ರಸ್ತೆಗೆ ಬರುತ್ತಿದೆ. ಆದರೂ ಸಹ ಯಾವೊಬ್ಬ ಅಧಿಕಾರಿಯೂ ಇತ್ತ ಕಡೆ ಗಮನ ಹರಿಸಿಲ್ಲ. ಸಣ್ಣ ಪ್ರಮಾಣದ ವಾಹನಗಳು ಇದರಲ್ಲಿ ಸಿಲುಕಿಕೊಂಡು ನಂತರ ಟ್ರ್ಯಾಕ್ಟರ್ ಗಳಿಂದ ಅವುಗಳನ್ನು ತೆಗೆಯುವಂತಹ ಪ್ರಯತ್ನಗಳು ಕೂಡ ಸಾಕಷ್ಟಾಗಿವೆ.
ಕೆಲವೊಂದು ಕಡೆ ನಳಗಳನ್ನು ಸರಿಯಾಗಿ ಜೋಡಿಸದೆ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ತಮಗೆ ಇಷ್ಟ ಬಂದಂತೆ ನಳಗಳನ್ನು ಜೋಡಿಸಿ ಒಂದೇ ದಿನದಲ್ಲಿ ನಳಗಳಿಗೆ ಹಾಕಿರುವ ಕಾಂಕ್ರಿಟ್ ಕಿತ್ತು ಹೋಗಿವೆ. ಅಷ್ಟೇ ಅಲ್ಲದೆ ನಳಗಳನ್ನು ಜೋಡಿಸಿ ಇನ್ನೂ ಒಂದು ತಿಂಗಳಾಗಿಲ್ಲ ಆಗಲೇ ತುಕ್ಕು ಹಿಡಿಯುತ್ತಿವೆ. ಇಷ್ಟರ ಮೇಲೆ ನೀವೇ ಯೋಚಿಸಿ ಇದರಲ್ಲಿ ಎಷ್ಟರ ಮಟ್ಟದಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು. ಒಟ್ಟಾರೆಯಾಗಿ ಈ ಕಾಮಗಾರಿ ತಳ ಬುಡವಿಲ್ಲದಂತೆ ನಡೆಯುತ್ತಿದೆ ಎಂದರೆ ತಪ್ಪಾಗಲಾರದು.
ಈ ಕಾಮಗಾರಿಯಿಂದ ಇಲ್ಲಿಯ ಹಳ್ಳಿಯ ಜನರು ಸಾಕಷ್ಟು ಹೈರಾಣಾಗಿದ್ದು ಈ ಜಲ ಜೀವನ್ ಮಿಷನ್ ಕಾಮಗಾರಿ ನಿಂತರೆ ಸಾಕೆಂಬ ಮನಸ್ಥಿತಿಗೆ ಬಂದು ತಲುಪಿದ್ದಾರೆ.
ಇಷ್ಟೆಲ್ಲಾ ಕಳಪೆ ಕಾಮಗಾರಿ ಮೇಲ್ನೋಟಕ್ಕೆ ಕಂಡು ಬಂದಿರುವುದು ಮಾತ್ರ, ಸಂಪೂರ್ಣ ವಿವರವನ್ನು ಬಯಲಿಗೆಳೆಯುವ ಮುನ್ನ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಇಂಜಿನಿಯರ್ ಗಳು ಎಚ್ಚೆತ್ತು ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಂಡು ಇಂತಹ ಬೃಹತ್ ಮೊತ್ತದ ಕಾಮಗಾರಿಯನ್ನು ಸರಿಯಾದ ರೀತಿಯಲ್ಲಿ ನಡೆಸುವಂತೆ ಸೂಚಿಸಬೇಕು.

ವರದಿ : ವಿಶ್ವನಾಥ ಭಜಂತ್ರಿ

error: Content is protected !!