ಪತಿಗೆ ಲೈಂಗಿಕ ಆಸೆ ಇಲ್ಲ ಎಂದು ವಿವಾಹಿತ ಮಹಿಳೆ ಬೇರೊಬ್ಬನ ಜೊತೆ ಸಂಬಂಧ ಬೆಳೆಸಿಕೊಂಡು ಮುಂದೊಂದು ದಿನ ಗಂಡನೇ ಇವರ ಕಾಮದಾಟಕ್ಕೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕಾಗಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಕೇಶ್ ತೊಮಂಗ್ ಕೊಲೆಯಾದವ. ಈತ ವೃತ್ತಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ. ಅಲ್ಲದೆ, ವಿಪರೀತ ಮದ್ಯವ್ಯಸನಿಯಾಗಿದ್ದ. ಪತ್ನಿ ದೇವಿ ತೊಮಾಂಗ್, ಪತಿ ರಾಕೇಶ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಆಗಾಗ ಊಟ ತಂದು ಕೊಡುತ್ತಿದ್ದಳು. ಈ ವೇಳೆ ಆಕೆಗೆ ಜೈನುಲ್ ಅಲಿ ಅಲಿಯಾಸ್ ಬಾಬು ಅಲಿ ಎಂಬಾತನ ಪರಿಚಯವಾಗಿತ್ತು.
ಆರಂಭದಲ್ಲಿದ್ದ ಪರಿಚಯ ನಂತರದ ದಿನಗಳಲ್ಲಿ ಪ್ರೇಮಕ್ಕೆ ತಿರುಗಿತ್ತು. ಈ ನಡುವೆ ಪತಿ ಹೆಚ್ಚು ಮದ್ಯ ಸೇವನೆಯಿಂದ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದ. ಇದರಿಂದಾಗಿ ದೇವಿ ತೊಮಾಂಗ್ ಬಾಬು ಅಲಿ ಜೊತೆ ಸಂಬಂಧ ಬೆಳೆಸಿದ್ದಳು. ಆಗಾಗ ವಡೇರಹಳ್ಳಿಯ ರಾಕೇಶ್ ನಿವಾಸಕ್ಕೆ ಬಾಬು ಬರುತಿದ್ದ. ಈ ನಡುವೆ ಪತಿಗೆ ಪತ್ನಿಯ ಮೇಲೆ ಅನೈತಿಕ ಸಂಬಂಧದ ಬಗ್ಗೆ ಅನುಮಾನ ಮೂಡಿತ್ತು. ಬಳಿಕ ಆಕೆಗೆ ಎಚ್ಚರಿಕೆ ಸಹ ನೀಡಿದ್ದ.
ಪತಿ ಇದ್ದರೆ ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಭಾವಿಸಿ, ಬಾಬು ಜೊತೆ ಸೇರಿಕೊಂಡು ನವೆಂಬರ್ 6ರಂದು ನಿದ್ರೆ ಮಂಪರಿನಲ್ಲಿದ್ದ ರಾಕೇಶ್ನನ್ನು ಕತ್ತು ಇಸುಕಿ ದೇವಿ ತೊಮಂಗ್ ಕೊಲೆ ಮಾಡಿದ್ದಳು. ಇದಾದ ಬಳಿಕ ಅತಿಯಾಗಿ ಮದ್ಯ ಸೇವಿಸಿ ಎದೆ ಉರಿಯಿಂದ ಮೃತಪಟ್ಟಿದ್ದಾನೆಂದು ನಾಟಕವಾಡಿದ್ದಳು. ಆದರೆ ಕತ್ತಿನ ಮೇಲೆ ಗಾಯದ ಗುರುತು ಕಂಡಿದ್ದ ಪೊಲೀಸರು, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಪತ್ನಿಯ ಕಳ್ಳಾಟ ಬಯಲಾಗಿದೆ.
ಪ್ರಕರಣ ಸಂಬಂಧ ಮೃತ ರಾಕೇಶ್ ಪತ್ನಿ ದೇವಿ ತೊಮಾಂಗ್ ಹಾಗೂ ಆಕೆಯ ಬಾಯ್ ಫ್ರೆಂಡ್ ಜೈನುಲ್ ಅಲಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.