
ಕೋಲಾರ: ಆಂಧ್ರ ಪ್ರದೇಶ ಪೊಲೀಸರು ಚಿನ್ನದ ರಾಬರಿ ಪ್ರಕರಣದಲ್ಲಿ ಕೆಜಿಎಫ್ ಮೂಲದ ಕಾಂಗ್ರೆಸ್ ಮುಖಂಡನನ್ನು ಬಂಧಿಸಿರುವ ಘಟನೆ ರಾಜ್ಯ ರಾಜಕೀಯ ವಲಯದಲ್ಲಿ ಸದ್ದು ಮಾಡಿದೆ. ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಹಾಗೂ ಹಾಲಿ ನಗರಸಭಾ ಸದಸ್ಯ ಜಯಪಾಲ್ ಅವರು ಈ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.
ಈ ಘಟನೆ ಏಪ್ರಿಲ್ 2ರ ರಾತ್ರಿ ತಮಿಳುನಾಡಿನಿಂದ ಚಿನ್ನದ ವ್ಯಾಪಾರಿಯಾಗಿರುವ ಚೇತನ್ ಜೈನ್ ಎಂಬುವವರು ಚಿನ್ನದ ಬಂಡಲದೊಂದಿಗೆ ಕೆಜಿಎಫ್ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ನಡೆದಿದೆ. ಚಾಲಿಸುತ್ತಿದ್ದ ಕಾರನ್ನು ಆಂಧ್ರ–ತಮಿಳುನಾಡು ಗಡಿಯಲ್ಲಿ ಇರುವ ನಾಯಕನೇರಿ ಘಾಟ್ ಬಳಿ ಆರೋಪಿಗಳ ತಂಡ ಅಡ್ಡಗಟ್ಟಿದ್ದು, ಸುಮಾರು 3.5 ಕಿಲೋಗ್ರಾಂ ಚಿನ್ನವನ್ನು ದೋಚಲಾಗಿದೆ.
ರಾಬರಿಯಲ್ಲಿ ಭಾಗಿಯಾದವರು ನಾಲ್ವರು ಎಂಬ ಮಾಹಿತಿ ದೊರೆತಿದೆ. ಜಯಪಾಲ್ ಅವರ ಜೊತೆ ಕಾರು ಚಾಲಕ ಮುಕ್ರಂ ಪಾಷಾ ಮತ್ತು ತಮಿಳುನಾಡು ಮೂಲದ ಇಬ್ಬರು ಇನ್ನಿತರರು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಬಳಿಕ ವಿಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಆಂಧ್ರದ ವಿಕೋಟ ಪೊಲೀಸರು ಈಗಾಗಲೇ ಪ್ರಕರಣ ಸಂಬಂಧ ಆರೋಪಿತರಿಂದ ದೋಚಲಾದ ಚಿನ್ನ ಹಾಗೂ ರಾಬರಿಯಲ್ಲಿ ಬಳಸಲಾದ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆ ಮುಂದುವರಿದಿದೆ.